ಉಡುಪಿ: ಆರೋಪಿಯನ್ನು ಬಂಧಿಸಲು ಪೊಲೀಸರು ಆಗಮಿಸುತ್ತಿದ್ದಂತೆ ಕ್ರಿಮಿನಾಶಕ ಸೇವಿಸಿ, ಆಸ್ಪತ್ರೆಗೆ ದಾಖಲು

ಉಡುಪಿ, ಆ.25: ನ್ಯಾಯಾಲಯದ ವಾರೆಂಟ್‌ನೊಂದಿಗೆ ತನ್ನನ್ನು ಬಂಧಿಸಲು ಬಂದ ಪೊಲೀಸರನ್ನು ಕಂಡ ಆರೋಪಿಯೊಬ್ಬ ವಿಷ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮಂಗಳೂರಿನ ಮುಚ್ಚೂರು ನಿವಾಸಿ ಕರುಣಾಕರ ಶೆಟ್ಟಿ (44) ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017ರಲ್ಲಿ ನಡೆದ ಪ್ರಕರಣದ ಆರೋಪಿಗಳಲ್ಲಿ ಒಬ್ಬ. ಆತನನ್ನು ಬಂಧಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.

ಅದರಂತೆ ಆ.24ರ ಮಧ್ಯಾಹ್ನ 3.30ರ ಸುಮಾರಿಗೆ ಶಿವಳ್ಳಿಯ ರಸಿಕ ಬಾರ್‌ನಲ್ಲಿ ಆರೋಪಿ ಕೆಲಸ ಮಾಡುತ್ತಿದ್ದಾನೆ ಎಂಬ ಖಚಿತ ಸುಳಿವಿನ ಮೇರೆಗೆ ಉಡುಪಿಯ ಶಿವಳ್ಳಿಗೆ ಆಗಮಿಸಿದ ಪೊಲೀಸರು ಆರೋಪಿ ಕರುಣಾಕರ್ ಬಗ್ಗೆ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಮೋದ್ ಎಂಬಾತನ ಬಳಿ ವಿಚಾರಣೆ ನಡೆಸಿದರು.

ನಂತರ ಕರುಣಾಕರ್ ಡ್ರೆಸ್ ಬದಲಾಯಿಸಿ ಪೊಲೀಸರೊಂದಿಗೆ ಬರುತ್ತೇನೆ ಎಂದು ಹೇಳಿ ತನ್ನ ಕೋಣೆಗೆ ತೆರಳಿದರು. ಆತ ಯಾವುದೋ ಕೀಟನಾಶಕ ಸೇವಿಸಿದ್ದಾನೆ. ಪೊಲೀಸರೊಂದಿಗೆ ಜೀಪಿನಲ್ಲಿ ಹೋಗುತ್ತಿದ್ದಾಗ ಕರುಣಾಕರ್ ಅಸ್ವಸ್ಥನಾಗಿದ್ದ. ಚಿಕಿತ್ಸೆಗಾಗಿ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories