Udupi

ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಆ್ಯಂಟಿ ಡ್ರಗ್ ಕಮಿಟಿ ರಚನೆ: ಎಸ್ಪಿ

ಉಡುಪಿ: ಮಾದಕ ದ್ರವ್ಯದಂತಹ ಸಮಾಜ ಘಾತಕ ಚಟುವಟಿಕೆ ಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಗೃಹ ಸಚಿವರ ಸಲಹೆಯಂತೆ ಸದ್ಯದಲ್ಲೇ ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಆ್ಯಂಟಿ ಡ್ರಗ್ ಕಮಿಟಿಯನ್ನು ಸ್ಥಾಪನೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚಿಂದ್ರ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಜಿಪಂ ಸಿಇಓ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳ ಸಭೆ ಕರೆದು ಚರ್ಚಿಸಲಾಗುವುದು. ಮುಂದೆ ಈ ಕಮಿಟಿಯ ಮೂಲಕ ಸ್ಪಷ್ಟವಾದ ಗುರಿ ಇಟ್ಟುಕೊಂಡು ಕೆಲಸ ಮಾಡಲಾಗುವುದು ಎಂದರು.

ಈಗಾಗಲೇ ಹಲವು ಮಂದಿ ವಿದ್ಯಾರ್ಥಿಗಳು ತಮ್ಮ ಹೆಸರು, ಮೊಬೈಲ್ ನಂಬರ್ ತಿಳಿಸದೆ ಇಂಟರ್‌ನೆಟ್ ಮೂಲಕ ಡ್ರಗ್ಸ್ ಜಾಲದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇದರಿಂದಲೇ ನಾವು ಸಾಕಷ್ಟು ಪ್ರಕರಣಗಳನ್ನು ಬೇಧಿಸಲು ಸಾಧ್ಯವಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ಪೋಷಕರು ಕೂಡ ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿರುವ ತಮ್ಮ ಮಕ್ಕಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.

ಈ ರೀತಿ ತಮ್ಮ ಹೆಸರನ್ನು ಬಹಿರಂಗ ಪಡಿಸದೆ ಸಮಾಜ ಘಾತಕ ಚಟುವಟಿಕೆ ಗಳ ಬಗ್ಗೆ ಮಾಹಿತಿ ನೀಡಲು ಮುಂದೆ ಬರಬೇಕು. ನಿಮ್ಮ ಹೆಸರನ್ನು ನಾವು ಕೂಡ ಗೌಪ್ಯವಾಗಿರಿಸಿಕೊಳ್ಳುತ್ತೇವೆ. ಯಾವುದೇ ಮಾಹಿತಿ ಇದ್ದರೂ ನನ್ನ ಮೊಬೈಲ್‌ಗೆ ಕಳುಹಿಸಿಕೊಡಬಹುದು. ಈ ಕಾರ್ಯಚರಣೆಯಲ್ಲಿ ಸಾರ್ವಜನಿಕರ ಪಾತ್ರ ಕೂಡ ಅಗತ್ಯವಾಗಿ ಬೇಕಾಗಿದೆ ಎಂದು ಅವರು ಮನವಿ ಮಾಡಿದರು.

ಇನ್ನು ಮುಂದೆ ಉಡುಪಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲೂ ಸೈಬರ್ ಕ್ರೈಮ್ ಸಂಬಂಧ ದೂರು ನೀಡಬಹುದಾಗಿದೆ. ಅಲ್ಲಿ ದೂರು ಸ್ವೀಕರಿಸಿ ಪ್ರಕರಣ ದಾಖಲಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಕುರಿತು ಎಲ್ಲ ಠಾಣಾ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದರು.

ಠಾಣಾಧಿಕಾರಿಗಳಿಗೆ ಯಾವ ದಾಖಲೆಗಳನ್ನು ಪಡೆದುಕೊಂಡು, ಯಾವ ರೀತಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬುದರ ಬಗ್ಗೆ ಎರಡು ದಿನಗಳ ತರಬೇತಿ ನೀಡಲಾಗಿದೆ. ಆದುದರಿಂದ ಸೈಬರ್ ಕ್ರೈಮ್ ಸಂಬಂಧಿಸಿ ಪ್ರತಿ ಪೊಲೀಸ್ ಠಾಣೆಯಲ್ಲೂ ದೂರನ್ನು ಸ್ವೀಕರಿಸುವುದು ಆಯಾ ಠಾಣೆಯ ಠಾಣಾಧಿಕಾರಿಗಳ ಜವಾಬ್ದಾರಿಯಾಗಿದೆ. ಅಲ್ಲಿ ಕೂಡಲೇ ವಂಚನೆಗೆ ಒಳಗಾದ ಬ್ಯಾಂಕ್ ಖಾತೆ ಯನ್ನು ಬ್ಲಾಕ್ ಮಾಡುವ ಕಾರ್ಯ ಮಾಡಲಾಗುವುದು ಎಂದು ಅವರು ಹೇಳಿದರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button