ಕಾರವಾರದಲ್ಲಿ ಕಾಂಗ್ರೆಸ್ ಭರ್ಜರಿ ಪ್ರದರ್ಶನ :ಡಾ.ಅಂಜಲಿ ನಿಂಬಾಳ್ಕರ್ ನಾಮಪತ್ರ ಸಲ್ಲಿಕೆ

ಕಾರವಾರ : ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ,ಕಾಂಗ್ರೆಸ್ ಪಕ್ಷದ ಹಿರಿಯರ ಜೊತೆ ,ಪಕ್ಷದ ಕಾರ್ಯಕರ್ತರ ಜೊತೆ ಬೃಹತ್ ಮೆರವಣಿಗೆಯ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಭಟ್ಕಳ ದಿಂದ ಮುಂಡಗೋಡ, ಹಳಿಯಾಳ, ಜೊಯಿಡಾದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳು ಹಾಗೂ ಕಿತ್ತೂರು ಖಾನಾಪುರ ತಾಲೂಕಿನಿಂದ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದರು.

ಕಾಂಗ್ರೆಸ್ ಪಕ್ಷದ ಶಾಲು, ಭಾವುಟ ಹಿಡಿದು ಕಾಂಗ್ರೆಸ್ ಪರ ,ಅಭ್ಯರ್ಥಿ ಪರ ಘೋಷಣೆಗಳನ್ನು ಕೂಗಿದರು.

ಮೆರವಣಿಗೆಗೂ ಮುನ್ನ, ಅಭ್ಯರ್ಥಿ ಡಾ. ಅಂಜಲಿ ಲಿಂಬಾಳ್ಕರ ಹಾಗೂ ಪಕ್ಷದ ಮುಖಂಡರು ಇಲ್ಲಿನ ಗಣಪತಿ ದೇವಸ್ಥಾನದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಮಾಲಾದೇವಿ ಮೈದಾನದಿಂದ ಪ್ರಾರಂಭವಾದ ಮೆರವಣೆಗೆಯು ಹೆಂಜಾ ನಾಯ್ಕ ವೃತ್ತ, ಸವಿತಾ ವೃತ್ತ, ಸುಭಾಷ ವೃತ್ತದ ಮೂಲಕ ಗ್ರೀನ್ ಸ್ಟ್ರೀಟ್ ರಸ್ತೆಯಯಲ್ಲಿ ಸಾಗಿ ಅಂಬೇಡ್ಕರ್ ವೃತ್ತ ತಲುಪಿತು.

ಮೆರವಣಿಗೆಯ ವೇಳೆಯೇ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಲಿಂಬಾಳ್ಕರ ಮಾತನಾಡಿ, ಕಿತ್ತೂರು ಖಾನಾಪುರದ ಜನರು ಹಿಂದೆ ಇದ್ದ ಬಿಜೆಪಿ ಸಂಸದರ ಫೋಟೋ ಕೂಡ ನೋಡಿಲ್ಲ. ಐದು ವರ್ಷ ಶಾಸಕಿಯಾಗಿದ್ದ ನಾನು ಅವರಿಗಿಂತ ಹೆಚ್ಚಿನ ಕೆಲ ಮಾಡಿದ್ದೇನೆ. ಇದೀಗ ನಿಮ್ಮ ಧ್ವನಿಯಾಗಿ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಮಾಡಿಕೊಡಬೇಕು ಎಂದರು. ಪಕ್ಷದ ಕಾರ್ಯರ್ತರು ಮನೆ ಮನೆಗಳಿಗೆ ತೆರಳಿ ಪಕ್ಷದ ಸಿದ್ದಾಂತವನ್ನು ಹಾಗೂ ಯೋಜನೆಗಳ ಬಗ್ಗೆ ತಿಳಿಸಬೇಕು ಎಂದು ಕರೆಕೊಟ್ಟರು.

ಕಾಂಗ್ರೆಸ್ ಹಿರಿಯ ಧುರೀಣ ಬಿ.ಕೆ ಹರಿಪ್ರಸಾದ ಮಾತನಾಡಿ, ಬಿಜೆಪಿಯವರು ಮುಂದಿನ 25 ವರ್ಷವನ್ನು ಗುರಿಯಾಗಿಸಿಕೊಂಡು ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಹಾಗೆಯೇ ಅವರ ಪ್ರಣಾಳಿಕೆಯೂ ಇದೆ. ಆದರೆ ಇಲ್ಲಿವರೆಗೆ ಜನರು ಏನು ಮಾಡಬೇಕು ? ಅಧಿಕಾರ ಇದ್ದಾಗ ಅಭಿವೃದ್ಧಿ ಮಾಡದೇ 2047 ರ ಭಾರತದ ಕನಸು ಕಾಣುವುದು ದಡ್ಡತನ ಎಂದರು.
ಕಾಂಗ್ರೆಸ್ ಪಕ್ಷವು ಕಚೇರಿಯಲ್ಲಿ ಕುಳಿತು ಪ್ರಣಾಳಿಕೆ ತಯಾರಿಸಿಲ್ಲ. ಜನರೊಂದಿಗೆ ಬೆರೆತು , ಅವರ ಕಷ್ಟಗಳನ್ನು ಅರಿತು, ಅವರ ಅಭಿವೃದ್ಧಿಗಾಗಿ ಪ್ರಣಾಳಿಕೆ ಯನ್ನು ತಯಾರಿಸಿದೆ. ಅದರ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.

ಶಾಸಕ ಆರ್.ವಿ ದೇಶಪಾಂಡೆ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಯುವಕರಿಗೆ ಉದ್ಯೋಗವಿಲ್ಲದಂತಾಗಿದೆ. ಎಂದರು.
ಜಿಲ್ಲಾ ಉಸ್ತವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಜಿಲ್ಲೆಯಲ್ಲಿ 30 ವರ್ಷ ಬಿಜೆಪಿ ಸಂಸದರಿದ್ದರೂ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಬಿಜೆಪಿಯಲ್ಲಿ ಸಂಸದರಿಂದ ಪ್ರಧಾನಿಯ ವರೆಗೂ ಸುಳ್ಳು ಹೇಳಿದ್ದು ಬಿಟ್ಟು , ಬೇರೇನೂ ಮಾಡಿಲ್ಲ. ಹೀಗಾಗಿ ಈಬಾರಿ ಮೂರು ಲಕ್ಷ ಮತಗಳ ಅಂತರದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಕೆಪಿಸಿಸಿ ಕಾರ್ಯದರ್ಶಿ ಮಂಜುನಾಥ ಭಂಡಾರಿ ಸಹ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು‌.

ಕಾಂಗ್ರೆಸ್ ಕಾರ್ಯಕರ್ತರು ಉರಿ ಬಿಸಿಲಲ್ಲಿ ಸಹ ಉತ್ಸಾಹ ಕಳೆದು ಕೊಳ್ಳದೆ ಮೆರವಣಿಗೆಯಲ್ಲಿದ್ದರು.

ಶಾಸಕ ಸತೀಶ ಸೈಲ್, ಶಾಸಕ ಭೀಮಣ್ಣ ನಾಯ್ಕ, ಶಾಸಕ ಬಾಬಾ ಸಾಹೇಬ ಪಾಟೀಲ, ಕಾಂಗ್ರೆಸ್ ಮುಖಂಡ ನಿವೇದಿತ ಆಳ್ವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ ಇದ್ದರು.

Latest Indian news

Popular Stories