ಕಾರವಾರ : ಕೂಸಿನ ಮನೆಯು ದೇಶದಲ್ಲಿಯೇ ವಿನೂತನ ಪ್ರಯೋಗವಾಗಿದ್ದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ನಗರ ಪ್ರದೇಶಗಳಲ್ಲಿ ಇರುವಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಶಿಶು ಪಾಲನಾ ಕೇಂದ್ರಗಳ ಅವಶ್ಯಕತೆಯನ್ನು ಅರಿತು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅಧಿಕಾರಿಗಳೆಲ್ಲರೂ ಕೂಸಿನ ಮನೆ ಯೋಜನೆ ಯಶಸ್ಸಿಗೆ ಕೈಜೋಡಿಸಬೇಕು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಎಂ. ದಾಸಗುಪ್ತ ಅವರು ಹೇಳಿದರು.
ಶುಕ್ರವಾರ ಕಾರವಾರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರ ಕಂದಮ್ಮಗಳ ಆರೈಕೆಗೆ ಕೂಸಿನ ಮನೆ ಆಸರೆಯಾಗಿದೆ. ಇಲ್ಲಿ ಮಗುವಿಗೆ ಆಹಾರ, ಆರೋಗ್ಯ ಸೇರಿದಂತೆ ಲಾಲನೆ-ಪಾಲನೆಯನ್ನು ಮಾಡಲಾಗುತ್ತದೆ.
ದೇಶದ ಭವಿಷ್ಯವಾದ ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ ಉತ್ತಮ ಆರೈಕೆ, ಪೌಷ್ಟಿಕಾಂಶಯುಕ್ತ ಆಹಾರ, ಕಲಿಕೆಗೆ ಉತ್ತಮ ಅಡಿಪಾಯದ ಅವಶ್ಯಕತೆಯಿದೆ. ಮಕ್ಕಳನ್ನು ಸಾಕಲು ಬಡ ಕುಟುಂಬಗಳಿಗಿರುವ ಅನಾನುಕೂಲಗಳನ್ನು ನೀಗಿಸಲು ಮತ್ತು ಕೆಲಸಕ್ಕೆಂದು ಹೋಗುವ ಮಹಿಳೆಯರಿಗೆ ಮಕ್ಕಳನ್ನು ಎಲ್ಲಿ ಬಿಡುವುದೆಂಬ ಚಿಂತೆಗೆ ಕೂಸಿನ ಮನೆ ಉತ್ತರವಾಗಿದೆ ಎಂದರು.
ಪ್ರತಿ ಗ್ರಾಮಕ್ಕೆ ಒಂದರಂತೆ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲು ಇಲಾಖೆ ಸಿದ್ದವಿದೆ. ಖಾಲಿ ಇರುವ ಕಟ್ಟಡ ಅಥವಾ ಸ್ಥಳ ಗುರುತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ವಸತಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಬೇಕಾಗುವಷ್ಟು ಪುಸ್ತಕಗಳು, ಕಂಪ್ಯೂಟರ್, ಇಂಟರ್ನೆಟ್ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ಸ್ಟಡಿ ಟೇಬಲ್, ಚೇರ್, ಬೆಳಕಿನ ವ್ಯವಸ್ಥೆ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವಂತೆ ಸೂಚಿಸಿದರು.
…….