ಕಾರವಾರ: ತುಳಿತಕ್ಕೆ ಒಳಗಾದಂತ ಸಮುದಾಯಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ದೃಷ್ಟಿಯಿಂದ ಜಿ. ಪಂ.ನ ಸಿಇಒ ಡಮಾಮಿ ಸಿದ್ದಿ ಸಮುದಾಯ ಪ್ರವಾಸೋದ್ಯಮ ಮನೆ ಅಭಿವೃದ್ಧಿಪಡಿಸಿ ಬುಡಕಟ್ಟು ಜನರನ್ನು ಸಮಾಜದ ಮೇಲ್ಪಂಕ್ತಿಯಲ್ಲಿ ತೆಗೆದುಕೊಂಡು ಹೋಗುವಂತಹ ಅತ್ಯಂತ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಅರಬೈಲ್ ಶಿವರಾಮ್ ಹೆಬ್ಬಾರ ಹೇಳಿದರು.
ಯಲ್ಲಾಪುರ ತಾಲ್ಲೂಕಿನ ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಿಂಗದಬೈಲ್ ಗ್ರಾಮದಲ್ಲಿ ಜಿಲ್ಲಾ, ತಾಲ್ಲೂಕಾ ಹಾಗೂ ಗ್ರಾಮ ಪಂಚಾಯತಿಯಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ
ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಡಮಾಮಿ ಸಿದ್ದಿ ಸಮುದಾಯ ಮನೆ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಹಲವು ಅಡೆತಡೆಗಳ ನಡುವೆಯೂ ಜಿ. ಪಂ.ನ ಸಿಇಒ ಬುಡಕಟ್ಟು ಮುದಾಯದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ರೂಪಿಸಿಕೊಳ್ಳಲು ಪೂರಕವಾಗುವಂತೆ ಉತ್ತಮ ಕಾರ್ಯ ಮಾಡಿದ್ದಾರೆ. ಒಂದು ಸಮುದಾಯದ ಕಲೆ, ಸಂಸ್ಕೃತಿ, ಜೀವನ ಶೈಲಿ, ಪರಿಸರ ಪರಿಚಯಿಸುವಂತಹ ನೈಸರ್ಗಿಕ ಪರಿಸರದ ಮಧ್ಯದಲ್ಲಿ ಈ ಸುಸಜ್ಜಿತ ಕಟ್ಟಡವನ್ನ ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದು, ಮುಂಬರುವ ಯಾವುದೇ ಅಡೆತಡೆಗಳಿಗೆ ಕಿವಿ ಕೊಡದೇ ಈ ಡಮಾಮಿ ಪ್ರವಾಸೋದ್ಯಮ ಸ್ಥಳಕ್ಕೆ ಬರುವ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುವ ಮೂಲಕ ನಿಸರ್ಗ ಸ್ಪರ್ಶ ಸಂಜೀವಿನಿ ಪ್ರವಾಸೋದ್ಯಮ ಗುಂಪಿನ ಮಹಿಳೆಯರು ಕಾರ್ಯ ನಿರ್ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯದ ನಡುವೆಯೇ ಪ್ರವಾಸೋದ್ಯಮ ಕ್ಷಣಗಳನ್ನ ಅನುಭವಿಸಲಾಗುತ್ತಿದೆ. ಆದರೆ ಈ ಕಟ್ಟಡದ ಸುತ್ತಲೂ ಅರಣ್ಯ ಪ್ರದೇಶ ಆವರಿಸಿದ್ದು, ವಾಯು ಮಾಲಿನ್ಯ ಮುಕ್ತವಾಗಿದೆ. ಹೀಗಾಗಿ ಇಲ್ಲಿಗೆ ಆಗಮಿಸಿದ ಅತಿಥಿಗಳಿಗೆ ಒಳ್ಳೆಯ ರೀತಿಯಿಂದ ಕಾಣಬೇಕು. ಸ್ಥಳೀಯ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ತಿಳಿಸಿಕೊಡಬೆಕು. ಅರಣ್ಯದಲ್ಲಿನ ಆದಾಯೋತ್ಪನ್ನ ಪದಾರ್ಥಗಳ ಕುರಿತು ಸಮಗ್ರ ಮಾಹಿತಿ ನೀಡುವ ಪ್ರಯತ್ನವಾಗಬೇಕು ಎಂದರು.
ಜಿ. ಪಂ. ಪ್ರಭಾರ ಯೋಜನಾ ನಿರ್ದೇಶಕ ಮಂಜುನಾಥ ನಾವಿ ಮಾತನಾಡಿ, ಸಿದ್ದಿ ಸಮುದಾಯ ಸಮಾಜದಲ್ಲಿ ಅತ್ಯಂತ ಹಿಂದುಳಿದ ಹಾಗೂ ವಿಶಿಷ್ಠವಾದ ಸಮುದಾಯವಾಗಿದೆ. ಈ ಸಮುದಾಯದ ಜನರ ಆರ್ಥಿಕ, ಸಮಾಜಿಕ ಸಬಲೀಕರಣ ಮತ್ತು ಈ ಸಮುದಾಯದ ವಿಶಿಷ್ಟತೆಗಳನ್ನು ವಿವಿಧ ಪ್ರದೇಶದಿಂದ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಪರಿಚಯಿಸಲು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿಯಿಂದ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನದಂತೆ ಸಿದ್ದಿ ಪ್ರವಾಸೋದ್ಯಮ ಕಟ್ಟಡ ನಿರ್ಮಿಸಲಾಗಿದೆ. ಇದರ ಸದುಪಯೋಗವನ್ನ ಸಮುದಾಯದ ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಡಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಉಪಾಧ್ಯಕ್ಷ ಕುಮಾರಿ ನಾಗವೇಣಿ ಸಿದ್ದಿ, ಸದಸ್ಯರಾದ ಗೋಪಾಲ ಸಿದ್ದಿ, ತಾ. ಪಂ. ಇ.ಒ. ಎನ್.ಆರ್. ಹೆಗಡೆ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ, ಸಿತಾರಾಮ ಸಂಜೀವಿನಿ ಗ್ರಾ. ಪಂ. ಮಟ್ಟದ ಒಕ್ಕೂಟದ ಅಧ್ಯಕ್ಷ ಪ್ರೇಮಾ ಜೋಶಿ, ಗ್ರಾ. ಪಂ. ಸರ್ವ ಸದಸ್ಯರು, ಪಿಡಿಒ, ಎನ್‌ಆರ್‌ಎಲ್‌ಎಂ ಹಾಗೂ ನರೇಗಾ ಅಧಿಕಾರಿಗಳು, ಸಿಬ್ಬಂದಿ, ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
…..