ಉ.ಕ | ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕು; ಈಶ್ವರ ಕುಮಾರ್ ಕಾಂದೂ

ಕಾರವಾರ : ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ವಿನೂತನ ಪ್ರಯೋಗಗಳ ಮೂಲಕ ಮಾನವ ಕಲ್ಯಾಣಕ್ಕಾಗಿ ಹಾಗೂ ಸಮಾಜದ ಒಳಿತಿಗಾಗಿ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂದು ಜಿ. ಪಂ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಹೇಳಿದರು.

ಅವರು ಗುರುವಾರ ಜಿಲ್ಲಾ ಪಂಚಾಯತ್ ಆವರಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ವಿಜ್ಞಾನ ಮಾದರಿ ಪ್ರದರ್ಶನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ನಿತ್ಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಗೂ ವೈಜ್ಞಾನಿಕ ಕಾರಣಗಳಿರುತ್ತವೆ. ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಯಿಂದ ಎಲ್ಲವನ್ನೂ ಅವಲೋಕಿಸಿ, ಅರ್ಥೈಸಿಕೊಳ್ಳಬೇಕು. ಹಾಗಿದ್ದಾಗ ಮಾತ್ರ ವಿಜ್ಞಾನ ವಿಷಯದಲ್ಲಿ ಪರಿಣಿತಿ ಹೊಂದಲು ಸಾಧ್ಯ. ಶಿಕ್ಷಕರು ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕು. ದೇಶದ ಭವಿಷ್ಯವಾದ ಮಕ್ಕಳ ಭವಿಷ್ಯ ಸದೃಢವಾಗಿರುವಂತೆ ಜಾಗೃತಿ ವಹಿಸಬೇಕು ಎಂದು ಹೇಳಿದರು. ಇದೇ ವೇಳೆ ವಿದ್ಯಾರ್ಥಿಗಳಿಂದ ತಯಾರಿಸಲ್ಪಟ್ಟ ವಿಭಿನ್ನ ಪ್ರಯೋಗಗಳನ್ನು ವೀಕ್ಷಿಸಿ, ಚಿಕ್ಕ ಮಕ್ಕಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರೋತ್ಸಾಹಿಸಿದರು.

ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ತಲಾ 2 ತಂಡಗಳು (ತಾಲ್ಲೂಕು ಮಟ್ಟದಲ್ಲಿ ವಿಜೇತ) ಭಾಗವಹಿಸಿದ್ದವು. ಕಸದಿಂದ ರಸ, ಸೋಲಾರ್ ಸ್ಕೂಟರ್, ವಾಹನ ಚಲಾಯಿಸುವಾಗ ಕಣ್ಮುಚ್ಚದಂತೆ ಎಚ್ಚರಿಸುವ ಸೆನ್ಸಾರ್ ಕನ್ನಡಕ, ಬಹುಪಯೋಗಿ ಕೃಷಿ ಉಪಕರಣ, ಭೂಕಂಪ ನಿರೋಧಕ ಮಂಚ, ಚಂದ್ರಯಾನ-3, ಸೋಲಾರ್ ಬೋಟ್ ಸೇರಿದಂತೆ ಹಲವು ವಿಶೇಷ ಪ್ರಯೋಗಗಳು ಗಮನ ಸೆಳೆದವು.

ವಿಜ್ಞಾನ ಸ್ಪರ್ಧೆ ವಿಜೇತರು :
ಸಿದ್ದಾಪುರ ತಾಲ್ಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಾದ ನವ್ಯಾ ಡಿ.ಎನ್ ಮತ್ತು ಕೆ.ಜಿ. ಲಿಖಿತಾ ಪ್ರಥಮ ಸ್ಥಾನ, ಅಂಕೋಲಾ ತಾಲೂಕಿನ ಕೆಣಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಾ ಹರಿಕಾಂತ ಮತ್ತು ಜನ್ಮಿತಾ ಹರಿಕಾನ್ರಾ ದ್ವೀತಿಯ ಸ್ಥಾನ, ಕುಮಟಾ ತಾಲ್ಲೂಕಿನ ಮೂರೂರು ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ದೀಪಕ ಮತ್ತು ಗಣೇಶ ಹೆಗ್ಡೆ ತೃತೀಯ ಸ್ಥಾನವನ್ನು ಪಡೆದುಕೊಂಡರು. ಸಮಾಧಾನಕರ ಬಹುಮಾನವನ್ನು ಶಿರಸಿ ಪ್ರೋಗ್ರೆಸ್ಸಿವ್ ಪ್ರೌಢ ಶಾಲೆಯ ಪ್ರೀತಿ ಎಚ್ ಗೊಲ್ಲರ ಮತ್ತು ಅಕ್ಷತಾ ಶಿವಾಜಿ ಅವತಡೆ, ಸಿದ್ದಾಪುರ ತಾಲ್ಲೂಕಿನ ಹರ್ಸಿಕಟ್ಟಾ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ನಯನಾ ನಾಯಕ ಮತ್ತು ಹರ್ಷಾ ನಾಯಕ್ ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ (ಅಭಿವೃದ್ಧಿ) ನಾರಾಯಣ ಜಿ. ನಾಯಕ, ಎನ್.ಆರ್.ಡಿ.ಎಮ್.ಎಸ್. ರಾಜ್ಯ ಮಟ್ಟದ ಅಧಿಕಾರಿ ಅನಿಲ್ ಆರ್. ನಾಯ್ಕ, ಸಹ ನಿರ್ದೇಶಕ (ಆಡಳಿತ) ಈಶ್ವರ ಹೆಚ್ ನಾಯ್ಕ್, ವಿಜ್ಞಾನ ಕೇಂದ್ರದ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

…..

Latest Indian news

Popular Stories