ವಿಜಯಪುರ : ಗುಂಟಾ ಲೇಔಟ್ ಒಂದು ರೀತಿ ಕಗ್ಗಂಟು ಆಗಿದೆ, ಅಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದಾರೆ, ದೊಡ್ಡ ಪ್ರಮಾಣದಲ್ಲಿ ಹಣ ಕೊಟ್ಟು ಎನ್.ಎ. ಪ್ಲಾಟ್ ಖರೀದಿ ಬಡವರಿಗೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ಅವರು ಅಲ್ಲಿ ಮನೆ ಕಟ್ಟಿಕೊಂಡಿದ್ದಾರೆ, ಅವರಿಗೆ ನೀರು, ರಸ್ತೆ ಕಲ್ಪಿಸದಿದ್ದರೆ ತೊಂದರೆಯಾಗುತ್ತದೆ, ಹೀಗಾಗಿ ಈ ಬಗ್ಗೆ ಒಂದು ದಾರಿ ಹುಡುಕಿ ಅಭಿವೃದ್ಧಿ ಕಾರ್ಯ ಕೈಗೊಳ್ಳಿ ಎಂದು ವಿಡಿಎ ಅಧಿಕಾರಿಗಳಿಗೆ ಸಚಿವ ಡಾ.ಎಂ.ಬಿ. ಪಾಟೀಲ ಸೂಚಿಸಿದರು.
ವಿಜಯಪುರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುಂಟಾ ಒಂದು ರೀತಿ ಗೊಂದಲ ಎದುರಾಗಿದೆ, ಅಲ್ಲಿ ಬಡವರಿಗೆ ಮೂಲ ಸೌಕರ್ಯ ಕಲ್ಪಿಸಬೇಕು, ಆದರೆ ನಿಯಮಾವಳಿ ಪ್ರಕಾರ ಅಲ್ಲಿ ಅಭಿವೃದ್ಧಿಗೆ ಅವಕಾಶವಿಲ್ಲ, ಆದರೂ ಅನೇಕ ಕಡೆ ಕಲ್ಪಿಸಲಾಗಿದೆ, ಇದೇ ರೀತಿ ಮುಂದುವರೆದರೆ ಅಧಿಕೃತವಾಗಿ ನಿವೇಶನ ರೂಪಿಸುವವರು ತಗಾದೆ ತೆಗೆಯುತ್ತಾರೆ, ಡೆವಲಪಮೆಂಟ್ ಶುಲ್ಕ ನಮ್ಮಿಂದ ಏಕೆ ವಸೂಲಿ ಮಾಡುತ್ತೀರಿ ಎಂಬ ಪ್ರಶ್ನೆ ಇರಿಸಿದ್ದಾರೆ, ಹೀಗಾಗಿ ಇದಕ್ಕೊಂದು ಪರಿಹಾರ ಹುಡುಕಿಕೊಳ್ಳಬೇಕಿದೆ ಎಂದರು.
ಆಶ್ರಯ ಮನೆಗಳು ಯಾರಿಗೆ ಹಂಚಿಕೆಯಾಗಿವೆಯೋ ಅಲ್ಲಿ ಯಾರೂ ಇಲ್ಲ, ಪಾಲಿಕೆ ಅಧಿಕಾರಿಗಳ ಸಂಬಂಧಿಕರು, ಕಾರ್ಪೋರೇಟರ್, ಮಾಜಿ ಕಾರ್ಪೋರೇಟರ್ ಸಂಬಂಧಿಕರು ಅಲ್ಲಿದ್ದಾರೆ, ಅನೇಕರು ಆಶ್ರಯ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ, ಹೀಗಾಗಿ ಆಶ್ರಯ ಮನೆಗಳಲ್ಲಿ ಯಾರು ನೈಜವಾಗಿ ಮಾಲೀಕರು ವಾಸಿಸುತ್ತಿದ್ದಾರೋ? ಬಾಡಿಗೆ ನೀಡಿದ್ದಾರೋ? ಎಂಬ ವಾಸ್ತವ ಸ್ಥಿತಿಗತಿಯನ್ನು ಅರಿಯಲು ಕೂಡಲೇ ವಿಶೇಷ ಸರ್ವೇ ನಡೆಸಲು ಸಚಿವ ಡಾ.ಎಂ.ಬಿ. ಪಾಟೀಲ ಸೂಚಿಸಿದರು.
ಹಂಚನಾಳ ಕೆರೆ ಕಲುಷಿತ: ಗರಂ
ಹಂಚನಾಳ ಕೆರೆ ಐವತ್ತು ವರ್ಷ ಕಳೆದರೂ ಶುದ್ಧವಾಗಿಲ್ಲ ಎಂದು ಪುನ: ಅಸಮಾಧಾನ ಹೊರಹಾಕಿದ ಸಚಿವ ಡಾ.ಎಂ.ಬಿ. ಪಾಟೀಲ, ಕೂಡಲೇ ಕೆರೆ ನೀರು ಶುದ್ಧೀಕರಣ, ಕೆರೆಯ ನೀರಿನ ಸದ್ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ವಿಡಿಎ, ಮಹಾನಗರ ಪಾಲಿಕೆ ಇಲಾಖೆ ಅಧಿಕಾರಿಗಳ ವಿಶೇಷ ಸಮನ್ವಯ ಸಭೆ ಕರೆದು ಇತ್ಯರ್ಥ ಪಡಿಸಿ ಎಂದು ಸೂಚಿಸಿದರು.
ಹಂಚಿನಾಳ ಕೆರೆಗೆ ಇಡೀ ನಗರದ ಕಲುಷಿತ ನೀರು ಸೇರುತ್ತಿದೆ, ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ನನಗೆ ಹಾಗೂ ಅಂದಿನ ಜಿಲ್ಲಾಧಿಕಾರಿಗಳನ್ನು ಆಹ್ವಾನಿಸಿದ್ದ ಅವರು `ನೀವು ಏನೂ ಮಾಡಬೇಡಿ, ಕೇವಲ ಈ ನೀರು ಕುಡಿಯಿರಿ ಸಾಕು…’ ಎಂದಷ್ಟೇ ಹೇಳಿದ್ದರು, ಕುಡಿಯಲು ಅಯೋಗ್ಯವಾದ ಅಶುದ್ಧ ನೀರು ನೋಡಿ ನಾನೇ ದಂಗಾದೆ, ಅವರು ತೊಂದರೆ ಎದುರಿಸುತ್ತಲೇ ಇದ್ದಾರೆ, ನಿಮಗೆ ಸಾಮಾಜಿಕ ಜವಾಬ್ದಾರಿ ಇಲ್ಲವೇ? ಈ ನಾಟಕ ಇನ್ಮುಂದೆ ನಡೆಯಲ್ಲ ಎಂದು ಪಾಲಿಕೆ ಅಧಿಕಾರಿಗಳ ವಿರುದ್ಧ ಗರಂ ಆದರು.
ವಿಶೇಷ ಸಭೆ ನಡೆಸಿ ಎರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ನಿಲುವು ಹೊರಬರಬೇಕು, ಹಂಚನಾಳ ಕೆರೆಗೆ ಅಕ್ವಾಡೆಕ್ಟ್ ಶಾಶ್ವತ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿಯೂ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಮೀಷನರ್ ಮನೆ ಕುಲಕರ್ಣಿ ಲೇಔಟ್ಗೆ ಸ್ಥಳಾಂತರಿಸಿ….
ಕುಲಕರ್ಣಿ ಲೇಔಟ್ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ, ಅಲ್ಲಿರುವ ಕಲುಷಿತ ವಾತಾವರಣದಿಂದಾಗಿ ಬೆಲೆಬಾಳುವ ಮನೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಹೋಗುತ್ತಿದ್ದಾರೆ, ಊಟ ಮಾಡಲು ಕುಳಿತರೆ ವಾಂತಿಯಾಗುವ ಅನುಭವ, ನಿಮಗೆ ಪರಿಸ್ಥಿತಿಯ ಅರಿವು ಇದೆಯೇ? ನಿಮ್ಮ ಮನೆ ಅಲ್ಲಿದ್ದರೇ ಹೇಗೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಆಕ್ರೋಶ ಹೊರಹಾಕಿ, ಪಾಲಿಕೆ ಆಯುಕ್ತರ ಮನೆಯನ್ನು ಕುಲಕರ್ಣಿ ಲೇಔಟ್ಗೆ ಸ್ಥಳಾಂತರಿಸಿ ಆಗ ಗೊತ್ತಾಗುತ್ತದೆ ಎಂದು ಖಾರವಾಗಿ ಅಸಮಾಧಾನ ಹೊರಹಾಕಿದರು.
ಈಗಾಗಲೇ ಕುಲಕರ್ಣಿ ಲೇಔಟ್ ಪ್ರಗತಿಗೆ ಸಂಬಂಧಿಸಿದಂತೆ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಬದರುದ್ದೀನ್ ಸೌದಾಗರ ವಿವರಣೆ ನೀಡಲು ಮುಂದಾದರು. ಇದು ನಾನು ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಿದ್ದಾಗಲೂ ಈ ಸಮಸ್ಯೆಯನ್ನು ಗಮನಕ್ಕೆ ತರುತ್ತಿದ್ದೇನೆ, ಒಂದು ರೀತಿ ನನಗೆ ನಾಚಿಕೆಯಾಗುತ್ತಿದೆ ಎಂದರು.
ಕುಲಕರ್ಣಿ ಲೇಔಟ್ಗೆ ನಾನೇ ಯಾವಾಗ ಭೇಟಿ ನೀಡುತ್ತೇನೋ ಗೊತ್ತಿಲ್ಲ, ನಾನು ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಇದೇ ರೀತಿಯ ವಾತಾವರಣವಿದ್ದರೆ ಕೂಡಲೇ ಪಾಲಿಕೆ ಆಯುಕ್ತರ ಮನೆಯನ್ನು ಆ ಸ್ಥಳಕ್ಕೆ ಸ್ಥಳಾಂತರಿಸಿ ಆದೇಶ ಹೊರಡಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಶಾಸಕರಾದ ಸಿ.ಎಸ್. ನಾಡಗೌಡ, ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ, ಪ್ರಕಾಶ ಹುಕ್ಕೇರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜಾ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಸೋನಾವನೆ, ಸಿಇಓ ರಾಹುಲ್ ಶೀಂಧೆ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.