ಇಂಜನಿಯರಿಂಗ್ ವಿದ್ಯಾರ್ಥಿಗಳಿಂದ ಬೃಹತ್ ಸ್ವಚ್ಛತಾ ಕಾರ್ಯ

ವಿಜಯಪುರ: ಇಕ್ವೇಷನ್, ಥಿಯರಿ ಮೊದಲಾದವುಗಳಲ್ಲಿಯೇ ಬ್ಯೂಸಿಯಾಗಿರುವ ಇಂಜನಿಯರಿಂಗ್ ವಿದ್ಯಾರ್ಥಿಗಳು ಪರಿಸರ ದಿನದ ಅಂಗವಾಗಿ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನ ನಡೆಸಿದರು.


ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗ, ರಾಜ್ಯ ಮಾಲಿನ್ಯ ಮಂಡಳಿ ಪ್ರಾದೇಶಿಕ ಕಚೇರಿ ಸಹಯೋಗದಲ್ಲಿ ತಿಕೋಟಾ ತಾಲೂಕಿನ ಮುಮ್ಮೆಟ್ಟಿಗುಡ್ಡ ಅಮೋಘಸಿದ್ದ ದೇವಸ್ಥಾನದ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ನೂರಾರು ವಿದ್ಯಾರ್ಥಿಗಳು ಹಲವಾರು ಗಂಟೆಗಳ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದರು.


ವಿಶ್ವ ಪರಿಸರ ದಿನದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿ ದೇವಸ್ಥಾನದ ಅಧಿಕಾರಿಗಳ ಮಾರ್ಗದರ್ಶನ ಸ್ವಚ್ಚತಾ ಕಾರ್ಯ ಕೈಗೊಂಡರು.
ನೇತೃತ್ವ ವಹಿಸಿದ್ದ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಎಂ.ಎ. ಮನಿಯಾರ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ವಹಿಸಬೇಕಾದ ಜವಾಬ್ದಾರಿ ಮತ್ತು ಜನಜಾಗೃತಿ ಕುರಿತು ಮಾಹಿತಿ ನೀಡಿದರು. ಪರಿಸರ ರಕ್ಷಣೆಯ ಜೊತೆಗೆ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಸಹ ಅತ್ಯಂತ ಅಗತ್ಯ, ಭೂಮಾಲಿನ್ಯವನ್ನು ತಡೆಗಟ್ಟಲು ಸ್ವಚ್ಛತೆಯ ಮಂತ್ರವನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.


ಇದೇ ವೇಳೆ ಪರಿಸರ ಸಂರಕ್ಷಣೆಯ ವಿಷಯದ ಕುರಿತು ವಿದ್ಯಾರ್ಥಿಗಳಿಗಾಗಿ ಭಾಷಣ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 20 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ. ವಿ. ಜಿ. ಸಂಗಮ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ನವೀನ ಎನ್. ದೇಸಾಯಿ, ಸಂಯೋಜಕಿ ಡಾ. ಅನುರಾಧಾ ಟಂಕಸಾಲಿ, ಅಧ್ಯಾಪಕರು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories