ರಾಹುಲ್‌ ಗಾಂಧಿ ವಿಜಯಪುರ ಕಾರ್ಯಕ್ರಮದಲ್ಲಿ ವಿಜಯಪುರ ಅಭ್ಯರ್ಥಿಯೇ ಇರಲಿಲ್ಲ: ಅರುಣ ಶಹಾಪೂರ

ವಿಜಯಪುರ : ಎಐಸಿಸಿ ಧುರೀಣ ರಾಹುಲ್ ಗಾಂಧಿ ಅವರು ವಿಜಯಪುರಕ್ಕೆ ಬಂದಾಗ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರೇ ಆ ಸಭೆಯಲ್ಲಿ ಇರಲಿಲ್ಲ, ಅವರ ಫೋಟೋ ಸಹ ಬ್ಯಾನರನಲ್ಲಿ ಅಲ್ಲಿರಲಿಲ್ಲ, ರಾಹುಲ್ ಗಾಂಧೀ ರಾಜು ಆಲಗೂರ ಅವರ ಹೆಸರು ಸಹ ಉಲ್ಲೇಖಿಸಿ ಮತಯಾಚಿಸಲಿಲ್ಲ, ಪ್ರಚಾರ ಸಭೆಗೆ ಅಭ್ಯರ್ಥಿಯನ್ನೇ ಆಹ್ವಾನ ನೀಡದೇ ಕಾಂಗ್ರೆಸ್ ಈಗಾಗಲೇ ಸೋಲು ಒಪ್ಪಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಪ್ರೊ.ರಾಜು ಆಲಗೂರ ಅವರ ಬಗ್ಗೆ ಅಪಾರ ಗೌರವವಿದೆ, ರಾಹುಲ್ ಗಾಂಧಿ ಅವರು ಲೋಕಸಭೆ ಚುನಾವಣೆ ಪ್ರಚಾರಕ್ಕೆ ವಿಜಯಪುರಕ್ಕೆ ಆಗಮಿಸಿದ್ದರೂ ಅಭ್ಯರ್ಥಿಯೇ ಅಲ್ಲಿ ಇಲ್ಲದಿರುವುದು ಒಂದು ರೀತಿ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ ಎಂದು ತೋರುತ್ತಿದೆ ಎಂದರು.

ಹಾಲಿ ಶಾಸಕರಾಗಿದ್ದ ಪ್ರೊ.ರಾಜು ಆಲಗೂರ ಅವರಿಗೆ ಕಾಂಗ್ರೆಸ್ ಪಕ್ಷ 2018 ರಲ್ಲಿ ಟಿಕೇಟ್ ಏಕೆ ನಿರಾಕರಣೆ ಮಾಡಿತು, 2024 ರ ಚುನಾವಣೆಯಲ್ಲಿಯೂ ಸಹ ಅವರಿಗೆ ಕಾಂಗ್ರೆಸ್ ಟಿಕೇಟ್ ನಿರಾಕರಣೆ ಮಾಡಿತ್ತು, ಈಗ ಲೋಕಸಭೆಗೆ ಯಾರೊಬ್ಬರು ಅಭ್ಯರ್ಥಿಯೇ ಕಾಂಗ್ರೆಸ್ ಬಳಿ ಇರಲಿಲ್ಲ, ಹೀಗಾಗಿ ಅನಿವಾರ್ಯವಾಗಿ ರಾಜು ಆಲಗೂರ ಅವರ ಕೊರಳಿಗೆ ಈ ಜವಾಬ್ದಾರಿ ವಹಿಸಿದೆ ಅಷ್ಟೇ ಎಂದರು.

ಈ ಹಿಂದೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ ಗುತ್ತಿಗೆದಾರರು ಸಹ ಈ ಸರ್ಕಾರದ ಮೇಲೆ ಅಸಮಾಧಾನಗೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗೆ ಲೋಕಾರ್ಪಣೆ ಮಾಡುವಲ್ಲಿ ಅಷ್ಟೇ ಏಕೆ ಶಾಸಕರಿಗೆ ಪ್ರದೇಶಾಭಿವೃದ್ಧಿ ನಿಧಿ ಅನುದಾನ ನೀಡುವಲ್ಲಿಯೂ ವಿಫಲವಾಗಿದೆ, ಹೀಗಾಗಿ ಕಾಂಗ್ರೆಸ್ ಶಾಸಕರಲ್ಲಿಯೇ ಅತೃಪ್ತಿ ಪ್ರಬಲವಾಗಿದೆ ಎಂದು ದೂರಿದರು.

ನೇತೃತ್ವದ ಬಗ್ಗೆ ಉತ್ತರ ನೀಡಲು ಸಾಧ್ಯವಿಲ್ಲದ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯೇ ಇಲ್ಲದಂತಾಗಿದೆ, ಇದಕ್ಕೆ ವ್ಯತಿರಿಕ್ತವಾಗಿ ಮೋದಿಜಿ ಅವರ ಅಖಂಡ ನೇತೃತ್ವ ಬಿಜೆಪಿ ಹೆಗಲಿದೆ ಇದೆ, ಕಳೆದ ವಿಧಾನಸಭಾ ಗೆಲುವಿನ ಗುಂಗಿನಿಂದ ಕಾಂಗ್ರೆಸ್ ಇನ್ನೂ ಹೊರಬಂದಿಲ್ಲ, ಇದೇ ಗುಂಗಿನಲ್ಲಿ ಲೋಕಸಭೆಯನ್ನೂ ಜಯಿಸುವ ಭ್ರಮೆ ಕಾಂಗ್ರೆಸ್ ಪಕ್ಷದಲ್ಲಿದೆ, ಒಂದು ರೀತಿ ಈ ಭ್ರಮೆ ಹೊರತುಪಡಿಸಿ ಯಾವ ರೀತಿಯ ಬತ್ತಳಿಕೆಯೂ ಇಲ್ಲ, ಕೇವಲ ಮೋದಿಜಿ ಅವರನ್ನು ತೆಗಳುವುದೊಂದಕ್ಕೆ ಕಾಂಗ್ರೆಸ್ ಸೀಮಿತವಾಗಿದೆ ಎಂದು ಶಹಾಪೂರ ಹೇಳಿದರು.

ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಯಡಿಯಲ್ಲಿ ಅನೇಕ ಜನರಿಗೆ ಆಗಿರುವ ಅನ್ಯಾಯವನ್ನು ನಾವು ಸಮರ್ಥವಾಗಿ ಬಿಂಬಿಸಿದ್ದೇವೆ, ಒಂದೇ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಭ್ರಮನಿರಸನವಾಗಿದೆ ಎಂದರು.

ಯತ್ನಾಳ ಸ್ಟೈಲೇ ಬೇರೆ:
ಯತ್ನಾಳರನ್ನು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಿದ್ದು ಜಿಗಜಿಣಗಿ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸೂಕ್ಷ್ಮ ಪ್ರತಿಕ್ರಿಯೆ ನೀಡಿದ ಅವರು, ಶಾಸಕ ಯತ್ನಾಳ ಅವರು ಅನೇಕ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಬಲವಾಗಿ ಪ್ರಚಾರ ನಡೆಸಿದ್ದಾರೆ, ವಿನಾಕಾರಣ ಅವರ ಹೆಸರು ಎಳೆದು ತರುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ, ಜಿಗಜಿಣಗಿ ಅವರ ಹೆಸರು ಉಲ್ಲೇಖಿಸದೇ ಪ್ರಚಾರ ಮಾಡಿದ್ದಾರೆ ಎಂದು ತೂರಿ ಬಂದ ಇನ್ನೊಂದು ಪ್ರಶ್ನೆಗೂ ಉತ್ತರಿಸಿದ ಶಹಾಪೂರ, ಯತ್ನಾಳ ಎಂದರೆ ಅವರ ಸ್ಟೈಲೇ ಬೇರೆ, ಅವರ ಶೈಲಿಯೇ ಬೇರೆ, ಅವರು ತಮ್ಮ ವೈಖರಿಯಲ್ಲಿ ಪ್ರಚಾರ ಮಾಡಿದ್ದಾರೆ ಎಂದರು. ಇನ್ನೂ ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯಕ್ಕೆ ಹೋದರೆ ಜಿಲ್ಲೆಯ ಪ್ರಭಾವಿ ನಾಯಕ ಡಾ.ಎಂ.ಬಿ. ಪಾಟೀಲ ಭಾರತ ಜೋಡೋ ಸೇರಿದಂತೆ ಅನೇಕ ವಿಷಯವಾಗಿ ಅವರ ಶ್ರಮವನ್ನು ಕಾಂಗ್ರೆಸ್ ನಾಯಕರು ಬಳಸಿಕೊಂಡರು, ಉಪಮುಖ್ಯಮಂತ್ರಿ ಒಂದೆಡೆ ಇರಲಿ ಅವರ ಬಯಸಿದ ಖಾತೆಯೂ ಅವರಿಗೆ ನೀಡಲಿಲ್ಲ ಎಂದು ಶಹಾಪೂರ ಹೇಳಿದರು.

100 ಕಟ್ಟೆಸಭೆ ಯಶಸ್ವಿ:
ಬಿಜೆಪಿ ಪ್ರಚಾರ ಸಾಗಿ ಬಂದಿರುವ ಕುರಿತಾಗಿಯೂ ವಿವರಣೆ ನೀಡಿದ ಶಹಾಪೂರ, ಭಾರತೀಯ ಜನತಾ ಪಕ್ಷ ಜಿಲ್ಲೆಯಲ್ಲಿ ಒಟ್ಟು 65 ಮಹಾಶಕ್ತಿ ಕೇಂದ್ರಗಳಲ್ಲಿ ಯಶಸ್ವಿ ಪ್ರಚಾರ ನಡೆಸಿದೆ, ಪಾದಯಾತ್ರೆ, ಬಹಿರಂಗ ಸಭೆ ಹಾಗೂ ಈ ಬಾರಿ ಔಪಚಾರಿಕ ಮತಯಾಚಿಸುವ ಕಟ್ಟೆ ಸಭೆಗಳ ಮೂಲಕ ಮತಯಾಚಿಸುವ ವಿಭಿನ್ನ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ, ಈ ಕಟ್ಟೆ ಸಭೆಯಲ್ಲಿ ರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, 100 ಕ್ಕೂ ಹೆಚ್ಚು ಕಟ್ಟೆಸಭೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಕೇವಲ ಮೋದಿಜಿ ಟೀಕೆ ಮಾಡಿ ಹಿಟ್ ಆ್ಯಂಡ್ ರನ್ ಪ್ರಚಾರ ಮಾಡಿದರೆ ತದ್ವಿರುದ್ಧವಾಗಿ ಬಿಜೆಪಿ ಅಭಿವೃದ್ಧಿ ಮುಂದಿರಿಸಿಕೊಂಡು ಮತಯಾಚನೆ ಮಾಡಿದೆ ಎಂದರು.

ಬಿಜೆಪಿ ಮುಖಂಡರಾದ ಸಂಜಯ ಪಾಟೀಲ ಕನಮಡಿ, ಶಂಕರಗೌಡ ಪಾಟೀಲ, ಭರತ ಕೋಳಿ, ಕೃಷ್ಣಾ ಗುನ್ನಾಳಕರ, ರವಿ ವಗ್ಗೆ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories