ಮಹಾರಾಷ್ಟ್ರದ ಗಡಿ ಗ್ರಾಮಗಳಿಗೆ ನೀರು ಬಿಡಲು ರೈತರ ಮನವಿ

ವಿಜಯಪುರ: ಮಹಾರಾಷ್ಟ್ರದ ಜತ್ ತಾಲೂಕಿನ ಗಡಿ ಗ್ರಾಮಗಳಿಗೆ ನೀರು ಬಿಡುಗಡೆ ಮಾಡಿಸುವಂತೆ ಆಗ್ರಹಿಸಿ ಅಲ್ಲಿನ ಶಾಸಕ ವಿಕ್ರಮಸಿಂಹ ಬಾಳಾಸಾಹೇಬ ಸಾವಂತ ನೇತೃತ್ವದಲ್ಲಿ ನಾನಾ ಗ್ರಾಮಗಳು ರೈತರು ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.


ವಿಜಯಪುರದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿದ ಜತ್ ಶಾಸಕರು ಮತ್ತು ನಾನಾ ಗ್ರಾಮಗಳ ರೈತರು, ಜಲಸಂಪನ್ಮೂಲ ಸಚಿವರಾಗಿದ್ದಾಗ ಎಂ. ಬಿ. ಪಾಟೀಲರು ಮಾಡಿರುವ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಿಂದಾಗಿ ಮಹಾರಾಷ್ಟ್ರದ ನಾನಾ ಗ್ರಾಮಗಳಿಗೆ ನೀರು ಬರುತ್ತಿದೆ. ಹೀಗಾಗಿ ಈ ಏತ ನೀರಾವರಿ ಯೋಜನೆ ಮೂಲಕ ಕೆರೆಳಿಗೆ ನೀರು ಹರಿಸುವಂತೆ ಮನವಿ ಮಾಡಿದರು.


ಮಹಾರಾಷ್ಟ್ರದ ಜತ್ ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ಎಂ. ಬಿ. ಪಾಟೀಲ, ಈಗ ನಮ್ಮ ಭಾಗದಲ್ಲಿ ನದಿಗೆ ನೀರಿನ ಒಳಹರಿವು ಕಡಿಮೆ ಇದೆ. ಮುಂಬರುವ ದಿನಗಳಲ್ಲಿ ನೀರಿನ ಒಳಹರಿವು ಗಮನಿಸಿ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಸಚಿವರ ಭೇಟಿ ಬಳಿಕ ಮಾತನಾಡಿದ ಜತ್ ಶಾಸಕ ವಿಕ್ರಮಸಿಂಹ ಸಾವಂತ, ಕರ್ನಾಟಕದ ಮಂತ್ರಿಯಾದ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಲು ನಾವು ಜತ್ ನಿಂದ ವಿಜಯಪುರಕ್ಕೆ ಬಂದಿದ್ದೇವೆ. ಜತ್ ತಾಲೂಕಿನ ನಮ್ಮ ಗಡಿ ಭಾಗಕ್ಕೆ ನೀರು ಬಿಡಲು ವಿನಂತಿ ಮಾಡಿದ್ದೇವೆ. ಅವರು ಸ್ಪಂದಿಸುವುದಾಗಿ ತಿಳಿಸಿದರು.


ಸಚಿವರು ನಿಮ್ಮ ಗಡಿ ಭಾಗಕ್ಕೆ ನಾವು ಸಹಕಾರ ಮಾಡುವುದಾಗಿ ನಮಗೆ ತಿಳಿಸಿದ್ದಾರೆ. ನಮ್ಮ ಭಾಗದಲ್ಲಿ ಮಹಿಶ್ಯಾಳ ಏತ ನೀರಾವರಿ ಯೋಜನೆ ಇದೆ. ಆದರೆ, ಅದು ಜತ್ ತಾಲೂಕಿನ ಪಶ್ಚಿಮ ಭಾಗಕ್ಕೆ ಬರುತ್ತದೆ. ಆದ್ದರಿಂದ ವಿಜಯಪುರ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಜತ್ ತಾಲೂಕಿನ ಭಾಗಕ್ಕೆ ಯಾವುದೇ ನೀರಾವರಿ ಯೋಜನೆಗಳಿಲ್ಲ. ತುಬಚಿ- ಬಬಲೇಶ್ವರ ಏತ ನೀರಾವರಿಯಿಂದ ಕೆರೆಗಳಿಗೆ ನೀರು ಹರಿಸಿದರೆ ಕರ್ನಾಟಕದ ಕೆರೆಗಳು ತುಂಬಿದ ನಂತರ ನಮ್ಮ ಭಾಗಕ್ಕೆ ನೈಸರ್ಗಿಕ ಹರಿವಿನ ಮೂಲಕ ನೀರು ಹರಿದು ಬರಲಿದೆ. ಇದರಿಂದ ಮಹಾರಾಷ್ಟರ್ದ ಗಡಿಯಲ್ಲಿರುವ 35 ಗ್ರಾಮಗಳಿಗೆ ನೀರು ಸಿಗಲಿದೆ. ನಮ್ಮ ಭಾಗದ ಏಳು ಕೆರೆಗಳಿಗೂ ನೀರು ಬರಲಿದೆ. ಅಷ್ಟೇ ಅಲ್ಲ, ಇದರಿಂದ ನಮ್ಮ ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಮಳೆ ಇಲ್ಲದ ಕಾರಣ ನಮ್ಮ ಗಡಿ ಭಾಗದ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮನವಿ ಮಾಡಿದ್ದೇವೆ. ಕರ್ನಾಟಕದಿಂದ ನೀರು ಹರಿದು ಬಂದರೆ ನಮ್ಮ ಭಾಗದ ಸಮಸ್ಯೆ ಬಗೆಹರಿಯಲಿದೆ. ನಮ್ಮ ಭಾಗದ ಏಳು ಕೆರೆಗಳು ಭರ್ತಿಯಾದ ನಂತರ ಮತ್ತೆ ಕರ್ನಾಟಕದ ಚಡಚಣ ಭಾಗಕ್ಕೆ ಇದೇ ನೀರು ಹರಿದು ಹೋಗುತ್ತದೆ ಎಂದು ಅವರು ತಿಳಿಸಿದರು.
ಈ ಹಿಂದೆಯೂ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನೀರು ಬಿಡುವಂತೆ ನಾವು ಆಗಾಗ ಸಾಕಷ್ಟು ಸಲ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದಾಗ ಸಚಿವ ಎಂ. ಬಿ. ಪಾಟೀಲ ಅವರು ಸ್ಪಂದಿಸಿದ್ದಾರೆ. ಹೀಗಾಗಿ ಈಗ ಮತ್ತೆ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಲು ಬಂದಿದ್ದೇವೆ ಎಂದು ಮಹಾರಾಷ್ಟ್ರದ ಶಾಸಕ ವಿಕ್ರಮಸಿಂಹ ಬಾಳಾಸಾಹೇಬ ಸಾವಂತ ತಿಳಿಸಿದರು.

Latest Indian news

Popular Stories