ಐಇಸಿ ಸಂಯೋಜಕರು ವಿಡಿಯೋ, ಫೋಟೊಗ್ರಫಿ ಕೌಶಲ್ಯ ಅಳವಡಿಸಿಕೊಳ್ಳಿ: ಮೂಗನೂರಮಠ

ವಿಜಯಪುರ : ಮಹಾತ್ಮಾ ಗಾಂಧಿ ನರೇಗಾ ಯೋಜನೆ ಅತ್ಯಂತ ಪ್ರಾಮುಖ್ಯತೆ ಪಡೆದ ಯೋಜನೆಯಾಗಿದ್ದು, ಈ ಯೋಜನೆಯಡಿ ಕೆಲಸ ಮಾಡುತ್ತಿರುವ ಐಇಸಿ ಸಂಯೋಜಕರು ವಿಡಿಯೋ ಹಾಗೂ ಛಾಯಾಗ್ರಹಣ ಕೌಶಲ್ಯವನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ವಿಜಯಪುರ ಜಿ.ಪಂ. ಉಪ ಕಾರ್ಯದರ್ಶಿ ಬಿ.ಎಸ್.ಮೂಗನೂರಮಠ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ವಿಜಯಪುರ ಜಿಲ್ಲಾ ಪಂಚಾಯತ್ ಇವರ ಸಹಯೋಗದಲ್ಲಿ ಆಯೋಜಿಸಿದ್ದಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಐಇಸಿ ಸಂಯೋಜಕರಿಗೆ ‘ವಿಡಿಯೋ ಮತ್ತು ಫೋಟೋ ಎಡಿಟಿಂಗ್’ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಅಭಿವೃದ್ಧಿಯನ್ನು ಸಾಧಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೆಣ್ಣು ಮಕ್ಕಳಿಗೆ ನರೇಗಾ ಯೋಜನೆಯ ಸಂಪೂರ್ಣ ಮಾಹಿತಿ ಒದಗಿಸಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು.

ಗೋಮಾಳದಲ್ಲಿ ಹಣ್ಣಿನ ಗಿಡ ನೆಡುವುದು, ಚೆಕ್ಡ್ಯಾಮಗಳ ನಿರ್ಮಾಣ, ನೀರಿನ ಸಂರಕ್ಷಣೆ ಇವುಗಳನ್ನೆಲ್ಲ ಸಮುದಾಯಕ್ಕಾಗಿ ಮಾಡುತ್ತಿದ್ದೇವೆಯೇ ಹೊರತು ಯಾವುದೇ ಪಂಚಾಯತಿಯ ಅಧ್ಯಕ್ಷರಿಗಾಗಿ ಅಲ್ಲ. ನರೇಗಾ ಯೋಜನೆಯಲ್ಲಿ ಮಾಡಿದ ಕಾರ್ಯವನ್ನು ಸರಿಯಾಗಿ ಸಂಯೋಜನೆ ಮಾಡಿ ತೋರಿಸಲಾಗುತ್ತಿಲ್ಲಾ. ಈ ವಿಷಯದಲ್ಲಿ ಉತ್ತರ ಕರ್ನಾಟಕದವರು ತುಂಬಾ ಹಿಂದುಳಿದಿರುವುದು ನಮ್ಮೆಲ್ಲರ ದೊಡ್ಡ ದೌರ್ಭಾಗ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ನಾವು ಯಾವುದೇ ಕೆಲಸ ಮಾಡಬೇಕೆಂದರೆ ನಮಗೆ ವಿವಿಧ ಕೌಶಲ್ಯಗಳ ಅಗತ್ಯತೆ ಇರುತ್ತದೆ. ಸ್ವ-ಕೌಶಲ್ಯಗಳ ಅನಿವಾರ್ಯತೆ ಇರುತ್ತದೆ. ನಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ನಾವು ಸಂವಹನ, ಸಾಮಾಜಿಕ ಸಂವಹನ, ಸಮಸ್ಯೆ ನಿರ್ವಹಣೆ ಕೌಶಲ್ಯ ಹೀಗೆ ಹಲವಾರು ಕೌಶಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ನಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯ ಎಂದರು. ಐಇಸಿ ಸಂಯೋಕರಾಗಿ ಕಾರ್ಯನಿರ್ವಹಿಸುತ್ತಿರುವಾಗ ಸಹ ಸಾಮಾಜಿಕ ಕೌಶಲ್ಯ, ಸಂವಹನ ಕೌಶಲ್ಯಗಳ ಅಗತ್ಯತೆ ಇದೆ. ಅದರಂತೆ ಫೋಟೊ ಮತ್ತು ವಿಡಿಯೋಗಳನ್ನು ಸಲ್ಲಿಸಬೇಕಾದ ಅನಿವಾರ್ಯತೆ ಇದ್ದಾಗ ಅವುಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ನೀವು ಚಿತ್ರೀಕರಿಸಿ ವರದಿ ಮಾಡಬೇಕು ಎಂದರು.
ನರೇಗಾ ಯೋಜನೆಯಡಿ ಐಇಸಿ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ನಿಮ್ಮ ಮೇಲೆ ಅತೀ ಹೆಚ್ಚಿನ ಜವಾಬ್ದಾರಿಗಳಿರುತ್ತವೆ. ಗ್ರಾಮೀಣಾಭಿವೃದ್ಧಿಯ ಮಹತ್ವಕಾಂಕ್ಷೆಯ ಯೋಜನೆಯನ್ನು ಈಡೇರಿಸುವಲ್ಲಿ ನಿಮ್ಮ ಪಾತ್ರ ಬಹಳ ಪ್ರಮುಖವಾಗಿದೆ. ಫಲಾನುಭವಿ ಮತ್ತು ಸರಕಾರದ ನಡುವೆ ನೀವು ಕೊಂಡಿಯಂತೆ ಕಾರ್ಯನಿರ್ವಹಿಸುತ್ತೀರಿ, ಹೀಗಾಗಿ ಈ ಯೋಜನೆಯ ಅನುಷ್ಠಾನದ ಯಶಸ್ವಿಗೆ ನಿಮ್ಮ ಕೊಡುಗೆ ಸಲ್ಲುತ್ತದೆ ಎಂದು ಆಶಿಸುತ್ತೇನೆ ಎಂದರು.

ಉದ್ಯೋಗ ಖಾತ್ರಿ ಯೋಜನೆ ಸರಕಾರದ ಬಹಳ ಪ್ರಾಮುಖ್ಯತೆ ಪಡೆದಿರುವಂತ ಯೋಜನೆ. ಇದಕ್ಕಾಗಿಯೇ ಸರಕಾರ ಸಾಕಷ್ಟು ಹಣವನ್ನು ಮೀಸಲಿಟ್ಟು ಈ ಮೂಲಕ ಸುಸ್ಥಿರವಾದ ಗ್ರಾಮೀಣಾಭಿವೃದ್ಧಿ ಆಗಬೇಕು ಎನ್ನುವುದು ಈ ಯೋಜನೆ ಉದ್ದೇಶ. ಅದರಂತೆ ಈ ತರಹದ ಯೋಜನೆಗಳಲ್ಲಿ ಮಹಿಳೆಯರು ಸಹ ಭಾಗಿಯಾಗಬೇಕು. ಅವರಿಗೂ ಸಹ ಇದರ ಕುರಿತು ಅರಿವನ್ನು ಮೂಡಿಸಬೇಕಿದೆ. ಈ ಕಾರ್ಯಾಗಾರ ನಿಮಗೆಲ್ಲ ಒಂದು ಹೊಸ ಕೌಶಲ್ಯ ಮತ್ತು ಸಾಮರ್ಥ್ಯವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.
ತುಮಕೂರಿನ ಶ್ರೀ.ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಮಾತನಾಡಿದರು. ಸಂಶೋಧನಾ ವಿದ್ಯಾರ್ಥಿನಿ ದೀಪಾ ತಟ್ಟಿಮನಿ ಸ್ವಾಗತಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಶೋಧನಾ ವಿದ್ಯಾರ್ಥಿನಿ ಫಿಲೋಮಿನಾ ವಂದಿಸಿದರು. ಸುಷ್ಮಾ ಪವಾರ ನಿರೂಪಿಸಿದರು.

Latest Indian news

Popular Stories