ಹುಬ್ಬಳ್ಳಿ: ನೇಹಾ ಹತ್ಯೆ ಖಂಡಿಸಿದ ಮುಸ್ಲಿಮರು, ಸಂತ್ರಸ್ತ ಹಿಂದೂ ಕುಟುಂಬ ಬೆಂಬಲಿಸಿ ಅರ್ಧ ದಿನ ಬಂದ್

ಧಾರವಾಡ: ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಮುಸ್ಲಿಂ ಪುರುಷರು ಮತ್ತು ಮಹಿಳೆಯರು ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿದರು ಮತ್ತು ಸಂತ್ರಸ್ತ ಹಿಂದೂ ಕುಟುಂಬಕ್ಕೆ ಸಾರ್ವಜನಿಕವಾಗಿ ಬೆಂಬಲ ನೀಡಿದರು.

ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಬೆಚ್ಚಿಬೀಳಿಸಿದ ಹೀನ ಕೃತ್ಯವನ್ನು ಖಂಡಿಸಿ ಅರ್ಧ ದಿನ ಬಂದ್ ಆಚರಿಸಿದರು ಮತ್ತು ಹಿರೇಮಠ ಅವರ ಕುಟುಂಬದ ಜೊತೆ ತಾವೂ ಇರುವುದಾಗಿ ಒಗ್ಗಟ್ಟು ಪ್ರದರ್ಶಿಸಿದರು.

‘ನೇಹಾ ಹಿರೇಮಠ್‌ಗೆ ನ್ಯಾಯ ಸಿಗಬೇಕು’ ಎಂದು ಒತ್ತಾಯಿಸಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂದೆ ಪೋಸ್ಟರ್‌ ಹಾಕಿದ್ದರು.

ಅಂಜುಮನ್-ಎ-ಇಸ್ಲಾಂನ ಧಾರವಾಡ ಘಟಕದ ಬ್ಯಾನರ್ ಅಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು, ಬಾಲಕ-ಬಾಲಕಿಯರು ನಗರದಲ್ಲಿ ನೇಹಾ ಹತ್ಯೆ ಖಂಡಿಸಿ ಫಲಕಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು ಮತ್ತು “ಹೆಣ್ಣುಮಕ್ಕಳನ್ನ ಗೌರವಿಸಬೇಕು ಹಾಗೂ ರಕ್ಷಿಸಬೇಕು” ಎಂದು ಒತ್ತಾಯಿಸಿದರು.

ನೇಹಾ ಹತ್ಯೆ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದರಿಂದ, ನಗರದಲ್ಲಿ ಮೀಸಲು ಪೊಲೀಸ್ ಪಡೆ ನಿಯೋಜನೆಯೊಂದಿಗೆ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಕೌನ್ಸಿಲರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ (23) ಅವರನ್ನು ಗುರುವಾರ ಬಿವಿಬಿ ಕಾಲೇಜು ಆವರಣದಲ್ಲಿ ಫಯಾಜ್ ಎಂಬ ಯುವಕ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದನು. ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಫಯಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ:

ಹುಬ್ಬಳ್ಳಿಯ ನೇಹಾ ಅಮಾನುಷ ಹತ್ಯೆ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನುಷ ಹತ್ಯೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾ ಕಛೇರಿಯ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ನೇತೃತ್ವ ವಹಿಸಿದ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರಕಾರದ ಒಂದೇ ವರ್ಗದ ಅತಿಯಾದ ತುಷ್ಟಿಕರಣವೇ ಇಂತಹ ಹೇಯ ಕೃತ್ಯಕ್ಕೆ ಮೂಲ ಕಾರಣ. ಕಾಂಗ್ರೆಸ್ ಸರಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಇಂತಹ ಕುಕೃತ್ಯ ಎಸಗುವವರಿಗೆ ಕಾನೂನಿನ ಭಯವಿಲ್ಲ. ವೋಟಿನ ಆಸೆಗಾಗಿ ಸರಕಾರ ಎಲ್ಲವನ್ನೂ ಹಗುರವಾಗಿ ಪರಿಗಣಿಸಿದೆ ಎಂದರು. ಘಟನೆಯನ್ನು ಖಂಡಿಸಿದ ಅವರು ಆರೋಪಿಗೆ ಕಾನೂನಾತ್ಮಕ ಗಲ್ಲು ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಾಸಕ ಯಶ್ಪಾಲ್ ಎ. ಸುವರ್ಣ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೇಬೆಟ್ಟು, ಮಹೇಶ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಪ್ರಮುಖರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮನೋಹರ್ ಎಸ್. ಕಲ್ಮಾಡಿ, ರಾಘವೇಂದ್ರ ಕುಂದರ್, ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ನಳಿನಿ ಪ್ರದೀಪ್ ರಾವ್, ಶ್ರೀನಿಧಿ ಹೆಗ್ಡೆ, ವಿಜಯ ಕುಮಾರ್ ಉದ್ಯಾವರ, ವೀಣಾ ಎಸ್. ಶೆಟ್ಟಿ, ಪ್ರಥ್ವಿರಾಜ್ ಶೆಟ್ಟಿ, ರಶ್ಮಿತಾ ಬಿ. ಶೆಟ್ಟಿ, ಶ್ರೀಕಾಂತ್ ನಾಯಕ್, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ದಿನೇಶ್ ಅಮೀನ್, ಮಟ್ಟು ಗೋಪಾಲಕೃಷ್ಣ ರಾವ್, ದಿಲೇಶ್ ಶೆಟ್ಟಿ, ಗಿರೀಶ್ ಎಮ್. ಅಂಚನ್, ಅಕ್ಷಿತ್ ಶೆಟ್ಟಿ ಹೆರ್ಗ,
ಶ್ರೀಕಾಂತ್ ಕಾಮತ್, ರೋಶನ್ ಶೆಟ್ಟಿ, ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ಸಚಿನ್ ಪಿತ್ರೋಡಿ, ಸುಮಾ ಶೆಟ್ಟಿ, ಮಂಜುಳಾ ಪ್ರಸಾದ್, ಸುಜಾಲ ಸತೀಶ್, ಅನಿತಾ ಬೆಲಿಂಡ ಡಿಸೋಜ, ಅಲ್ವಿನ್ ಡಿಸೋಜ, ಶೇಖ್ ಆಸೀಫ್ ಕಟಪಾಡಿ, ದೀರಜ್ ಎಸ್.ಕೆ., ಸಂತೋಷ್ ಜತ್ತನ್, ದಿನಕರ ಪೂಜಾರಿ ಸಹಿತ ನಗರಸಭಾ ಸದಸ್ಯರು, ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯಪುರ:

ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

ವಿಜಯಪುರ: ಕು.ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.


ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಮಹಾತ್ಮ ಗಾಂಧಿ ಚೌಕ್, ಬಸವೇಶ್ವರ ವೃತ್ತದ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿ, ತಕ್ಷಣ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ, ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಖಂಡಿಸಿ ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸಲಾಯಿತು.


ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಅಮಾಯಕ ಹಿಂದೂ ಯುವತಿಯನ್ನು ಕೊಂದಿರುವ ಹೀನ ಕೃತ್ಯಕ್ಕೆ ಕಾರಣನಾದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳುವ ಜೊತೆಗೆ ಯುವತಿಯ ಕುಟುಂಬದ ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿಲ್ಲಬೇಕಿತ್ತು. ಆದರೆ, ಮುಖ್ಯಮಂತ್ರಿ ಆದಿಯಾಗಿ ಬಹುತೇಕ ಸಚಿವರು ಆಕಸ್ಮಿಕ, ವೈಯಕ್ತಿಕ ಘಟನೆ ಎಂದು ಬೇಜಾಬ್ದಾರಿ ಹೇಳಿಕೆ ನೀಡುವ ಮೂಲಕ ತನಿಖೆ ಹಾದಿ ತಪ್ಪಿಸುವ ಜೊತೆಗೆ ನೊಂದ ಕುಟುಂಬದ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದರು. ಸ್ವತ ಯುವತಿಯ ಪಾಲಕರೇ ಕಾಂಗ್ರೆಸ್ ಧೋರಣೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್ನ ಓಲೈಕೆ ರಾಜಕಾರಣದಿಂದಾಗಿ ರಾಜ್ಯದಲ್ಲಿ ಹಿಂದೂಗಳು ಭಯದಲ್ಲಿ ಜೀವನ ಮಾಡುವಂತಾಗಿದೆ. ಎಲ್ಲೆಂದರಲ್ಲಿ ದೇಶದ್ರೊಹಿ ಹೇಳಿಕೆ, ಘೋಷಣೆ ಕೇಳುತ್ತಿವೆ. ನಮ್ಮ ಯುವತಿಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹೆಚ್ಚುತ್ತಿವೆ ಎಂದು ಕಿಡಿಕಾರಿದರು.
ಸಂಸದ ರಮೇಶ ಜಿಗಜಿಣಗಿ, ಮಹಿಳಾ ಘಟಕದ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿದರು. ಮುಖಂಡರಾದ ಅರುಣ ಶಹಾಪುರ, ವಿಜುಗೌಡ ಪಾಟೀಲ, ಕಾಶುಗೌಡ ಬಿರಾದಾರ, ಸಂಜಯ ಪಾಟೀಲ ಕನಮಡಿ, ವಿವೇಕಾನಂದ ಡಬ್ಬಿ, ಶ್ರೀಹರ್ಷಗೌಡ ಪಾಟೀಲ, ಪ್ರಕಾಶ ಅಕ್ಕಲಕೋಟ, ಈರಣ್ಣ ರಾವುರ, ಸಾಬು ಮಾಶ್ಯಾಳ, ಉಮೇಶ್ ಕೊಳಕರ್ ಮತ್ತಿತರರು ಇದ್ದರು.

Latest Indian news

Popular Stories