ಧರ್ಮಾಧಾರಿತ ಮತಯಾಚನೆ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು, (ಏಪ್ರಿಲ್ 26): ಧರ್ಮದ (religion) ಆಧಾರದಲ್ಲಿ ಮತಯಾಚನೆ ಮಾಡಿದ ಆರೋಪ ಮೇರೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ಚುನಾವಣಾ ಆಯೋಗ ದೂರು ದಾಖಲಿಸಿದೆ.

ಜನ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 123(3)ರ ಅಡಿ ಪ್ರಕರಣ ದಾಖಲಾಗಿದೆ. ಧರ್ಮದ ಆಧಾರದಲ್ಲಿ ಮತಯಾಚನೆ ಮತ್ತು ಈ ಕುರಿತು ವಿಡಿಯೊವೊಂದನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ಜಯನಗರ ಠಾಣೆಯಲ್ಲಿ ಸೆಕ್ಷನ್‌ 123(3) ಅಡಿ ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮತದಾನಕ್ಕೆ ಒಂದು ದಿನ ಮೊದಲು ಅಂದರೆ ಏಪ್ರಿಲ್ 25 ರಂದು ತೇಜಸ್ವಿ ಸೂರ್ಯ ತಮ್ಮ ಎಕ್ಸ್‌ನಲ್ಲಿ ಅಯೋಧ್ಯೆಯ (Ayodhya) ಬಾಲ ರಾಮನ ಹಣೆಗೆ ಸೂರ್ಯ ಸ್ಪರ್ಶಿಸುವ ವಿಡಿಯೋವನ್ನು ಅಪ್ಲೋಡ್‌ ಮಾಡಿ, ರಾಮ ನವಮಿಯಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಮೇಲೆ ಭವ್ಯವಾದ ಸೂರ್ಯ ತಿಲಕವನ್ನು ವೀಕ್ಷಿಸಲು ನಮ್ಮ ಪೀಳಿಗೆಯು ಆಶೀರ್ವದಿಸಲ್ಪಟ್ಟಿದೆ. ಸುಮಾರು 500 ವರ್ಷಗಳ ಕಾಯುವಿಕೆ ಮತ್ತು ಕೋಟಿಗಟ್ಟಲೆ ಭಾರತೀಯರ ಆಶಯವನ್ನು ಪ್ರಧಾನಿ ಈಡೇರಿಸಿದ್ದಾರೆ. ಭಾರತೀಯತೆ ಉಳಿಯಲು ಬಿಜೆಪಿಗೆ ಮತ ನೀಡಿ ಎಂದು ಬರೆದುಕೊಂಡಿದ್ದರು.

Latest Indian news

Popular Stories