ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರ: ಶೇ.66.32 ರಷ್ಟು ಮತದಾನ

ವಿಜಯಪುರ : ಪ್ರಾಥಮಿಕ ಮಾಹಿತಿ ಅನ್ವಯ ಕಳೆದ ಅವಧಿ ಅಂದರೆ 2019 ರಲ್ಲಿ ನಡೆದ ವಿಜಯಪುರ ಲೋಕಸಭೆ ಚುನಾವಣೆ ಮತದಾನ ಪ್ರಮಾಣಕ್ಕಿಂತ ಈ ಬಾರಿ ಶೇ.5 ರಷ್ಟು ಪ್ರಮಾಣದಲ್ಲಿ ಮತದಾನ ಅಧಿಕವಾಗಿದೆ. ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಶೇ.66.32 ರಷ್ಟು ಮತದಾನವಾಗಿದೆ. ಬಿರು ಬಿಸಲಿನ ಮಧ್ಯೆಯೂ ಕಳೆದ ಅವಧಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ.

ವಿಧಾನಸಭಾ ಕ್ಷೇತ್ರವಾರು ಅವಲೋಕಿಸುವುದಾದರೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಶೇ.71.03, ಬಸವನ ಬಾಗೇವಾಡಿಯಲ್ಲಿ ಶೇ.70.83, ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.67.25, ನಾಗಠಾಣ ಕ್ಷೇತ್ರದಲ್ಲಿ ಶೇ.66.8, ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.66.38, ಮುದ್ದೇಬಿಹಾಳದಲ್ಲಿ ಶೇ.64.74, ವಿಜಯಪುರ ನಗರದಲ್ಲಿ ಶೇ.62.24, ದೇವರಹಿಪ್ಪರಗಿಯಲ್ಲಿ ಶೇ.62.11 ರಷ್ಟು ಮತದಾನವಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

2019 ರಲ್ಲಿ ನಡೆದ ಚುನಾವಣೆಯಲ್ಲಿ ಶೇ.61.81 ರಷ್ಟು ಮತದಾನವಾಗಿತ್ತು. ಆ ಪೈಕಿ ಬಿಜೆಪಿಯ ರಮೇಶ ಜಿಗಜಿಣಗಿ ಅವರು ಶೇ.57 ರಷ್ಟು ಮತಗಳನ್ನು ಪಡೆದುಕೊಂಡು ವಿಜಯಮಾಲೆ ಧರಿಸಿದ್ದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚವ್ಹಾಣ ಶೇ.34 ರಷ್ಟು ಮತಗಳನ್ನು ಪಡೆದುಕೊಂಡಿದ್ದನ್ನು ಸ್ಮರಿಸಬಹುದಾಗಿದೆ.

ಬೆಳಿಗ್ಗೆ ಮತದಾನ ಆರಂಭಗೊಳ್ಳುತ್ತಿದ್ದಂತೆ ಉತ್ಸಾಹದ ಮತದಾನ ನಡೆಯಿತು. ಬೆಳಿಗ್ಗೆ 9 ಗಂಟೆ ವೇಳೆ ಶೇ.9.23 ರಷ್ಟು ಮತದಾನವಾಗಿತ್ತು, ಮಧ್ಯಾಹ್ನ 11 ಗಂಟೆ ವೇಳೆಗೆ ಈ ಪ್ರಮಾಣ ಅಧಿಕವಾಗಿ ಶೇ. 24.30 ರಷ್ಟಾಯಿತು. ನಂತರ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.40.18 ರಷ್ಟಾಯಿತು, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ.50.43 ರಷ್ಟಾಯಿತು. ಸಂಜೆ 5 ಗಂಟೆ ವೇಳೆಗೆ 61.18 ರಷ್ಟಾಗಿದ್ದು, ಮತದಾನ ವೇಳೆ ಪೂರ್ಣಗೊಳ್ಳುವವರೆಗೆ ಪ್ರಾಥಮಿಕ ಮಾಹಿತಿ ಅನ್ವಯ ಶೇ.66.32 ರಷ್ಟು ಮತದಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Latest Indian news

Popular Stories