ಧರ್ಮಶಾಲಾ: ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಭಾರಿ ಹಾನಿಯನ್ನುಂಟು ಮಾಡಿದೆ. ಭೂಕುಸಿತಗಳು ಮತ್ತು ಮುಳುಗುವ ಮನೆಗಳ ವೀಡಿಯೊಗಳನ್ನು ನೋಡಿ ಪ್ರಪಂಚದಾದ್ಯಂತ ಜನರು ಆಘಾತಕ್ಕೊಳಗಾಗಿದ್ದಾರೆ. ಈ ಮಳೆಗಾಲದಲ್ಲಿ 238ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ದುರಂತದ ನಂತರ ಇದೀಗ ಐಐಟಿ ಮಂಡಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಅವರು ಹಿಮಾಚಲದಲ್ಲಿ ಮಾಂಸಾಹಾರ ಸೇವನೆಯಿಂದ ಈ ವಿನಾಶ ಸಂಭವಿಸಿದೆ ಎಂದು ಹೇಳಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯದಿಂದ ಮೋಡಗಳು ಸಿಡಿಯುತ್ತಿವೆ ಎಂದರು. ಮಾಂಸಾಹಾರ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಮಕ್ಕಳಿಗೆ ತಿಳಿಸಿದರು.
ಐಐಟಿ ನಿರ್ದೇಶಕ ಲಕ್ಷ್ಮೀಧರ್ ಬೆಹೆರಾ ಮಾತನಾಡಿ, ‘ಪ್ರಾಣಿಗಳನ್ನು ಕೊಲ್ಲುವುದನ್ನು ನಿಲ್ಲಿಸದಿದ್ದರೆ ಹಿಮಾಚಲ ಪ್ರದೇಶ ಕುಸಿಯುತ್ತದೆ. ನೀವು ಪ್ರಾಣಿಗಳನ್ನು ಕೊಲ್ಲುತ್ತಿದ್ದೀರಿ, ಆ ಪ್ರಾಣಿಗಳು ಪರಿಸರದೊಂದಿಗೆ ಸಂಬಂಧವನ್ನು ಹೊಂದಿವೆ. ನೀವು ಆ ಸಂಬಂಧವನ್ನು ನೋಡಲು ಸಾಧ್ಯವಿಲ್ಲ.
ಪ್ರಾಣಿಗಳ ಮೇಲಿನ ಕ್ರೌರ್ಯದಿಂದಾಗಿ ಹಿಮಾಚಲದಲ್ಲಿ ಮತ್ತೆ ಮತ್ತೆ ಭೂಕುಸಿತಗಳು ಮತ್ತು ಮೋಡಗಳ ಸ್ಫೋಟಗಳು ಸಂಭವಿಸುತ್ತಿವೆ ಎಂದು ಐಐಟಿ ನಿರ್ದೇಶಕರು ತಿಳಿಸಿದ್ದಾರೆ. ಲಕ್ಷ್ಮೀಧರ್ ಬೆಹೆರಾ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಳ್ಳೆಯ ವ್ಯಕ್ತಿಯಾಗಲು ಏನು ಮಾಡಬೇಕು? ಮಾಂಸ ತಿನ್ನುವುದನ್ನು ನಿಲ್ಲಿಸಬೇಕು. ಇದಾದ ನಂತರ ಮಾಂಸಾಹಾರ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ವಿದ್ಯಾರ್ಥಿಗಳನ್ನು ಕೇಳಿದ್ದಾರೆ.
ಇದಕ್ಕೂ ಮುನ್ನ ಲಕ್ಷ್ಮೀಧರ್ ಬೆಹೆರಾ ಅವರು ತಮ್ಮ ಒಂದು ಕಾಮೆಂಟ್‌ನಿಂದಾಗಿ ಟ್ರೋಲ್ ಆಗಿದ್ದರು. ಮಂತ್ರ ಪಠಣೆ ಮೂಲಕ ತನ್ನ ಸ್ನೇಹಿತನ ಮನೆ ಮತ್ತು ಕುಟುಂಬವನ್ನು ದುಷ್ಟಶಕ್ತಿಗಳಿಂದ ಮುಕ್ತಗೊಳಿಸಿದ್ದೇನೆ ಎಂದು ಅವರು ಕಳೆದ ವರ್ಷ ಹೇಳಿದ್ದರು. ಲಕ್ಷ್ಮೀಧರ್ ಬೆಹೆರಾ ಅವರು ಹಿಮಾಚಲದ ವಿನಾಶಕ್ಕೆ ಮಾಂಸ ಸೇವನೆಯನ್ನು ದೂಷಿಸುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.