ಕಾರವಾರ | ದೋಣಿಯೊಂದಿಗೆ ಸಮುದ್ರದಲ್ಲಿ ನಾಪತ್ತೆಯಾಗಿದ್ದ 27 ಮಂದಿ ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

ಕಾರವಾರ, ಡಿ.6: ಕಳೆದ ನಾಲ್ಕು ದಿನಗಳಿಂದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಸಮೇತ ನಾಪತ್ತೆಯಾಗಿದ್ದ 27 ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿ ಕಾರವಾರ ಬಂದರಿಗೆ ಕರೆತಂದಿದ್ದಾರೆ.

ಮೀನುಗಾರರಿದ್ದ ದೋಣಿ ಅರಬ್ಬಿ ಸಮುದ್ರದ 30 ನಾಟಿಕಲ್ ಮೈಲು ದೂರದಲ್ಲಿ ನಾಪತ್ತೆಯಾಗಿದೆ ಎಂದು ವರದಿಯಾಗಿದ್ದು, ಪ್ರಕ್ಷುಬ್ಧ ವಾತಾವರಣದಲ್ಲಿ ಒಂಬತ್ತು ಗಂಟೆಗಳ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ. ಮೀನುಗಾರರು ಸುರಕ್ಷಿತವಾಗಿ ಕಾರವಾರ ಮೀನುಗಾರಿಕಾ ಬಂದರಿಗೆ ತಲುಪಿದ್ದಾರೆ.

ಪಣಜಿಯ ಕ್ರಿಸ್ಟೋ ರೇ ಎಂಬ ಮೀನುಗಾರಿಕಾ ದೋಣಿಯು ಪ್ರತಿಕೂಲ ಹವಾಮಾನದಿಂದಾಗಿ ಅದರ ಎಂಜಿನ್‌ನಲ್ಲಿ ಸಮಸ್ಯೆಗಳನ್ನು ಎದುರಿಸಿತು ಮತ್ತು ಹತ್ತಿರದ ಯಾವುದೇ ಬಂದರನ್ನು ಸಮೀಪಿಸಲು ಸಾಧ್ಯವಾಗದೆ ದಾರಿ ತಪ್ಪಿತು. ಇದು ಮೀನುಗಾರಿಕೆ ಇಲಾಖೆಯ ಸಂಪರ್ಕವನ್ನು ಕಳೆದುಕೊಂಡಿತು. ಗೋವಾ ಪೊಲೀಸರು ಮತ್ತು ಕರ್ನಾಟಕ ಪೊಲೀಸರಿಗೆ ಸಂದೇಶ ರವಾನೆಯಾಗುತ್ತಿದ್ದಂತೆ, ಕೋಸ್ಟ್ ಗಾರ್ಡ್ ಸಹಾಯವನ್ನು ಕೋರಲಾಯಿತು.

ದೋಣಿಯು ಭೂಮಿಯನ್ನು ಸಂಪರ್ಕಿಸಲು ಅಥವಾ ವೈರ್‌ಲೆಸ್ ನೆಟ್‌ವರ್ಕ್ ಪಡೆಯಲು ಸಾಧ್ಯವಾಗದ ಕಾರಣ, ಆರಂಭದಲ್ಲಿ ಅದನ್ನು ಗುರುತಿಸುವುದು ಕಷ್ಟಕರವಾಗಿತ್ತು. ದೋಣಿಯಲ್ಲಿದ್ದ ಎಲ್ಲ ಮೀನುಗಾರರು ಸುರಕ್ಷಿತವಾಗಿದ್ದಾರೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Latest Indian news

Popular Stories