State News

ಕಾರಂಜಾ ದಿಂದ ಔರಾದಗೆ ನೀರು ಪೂರೈಕೆ:ಕೆಲಸ ಶೀಘ್ರ ಆರಂಭಿಸಲು ಶಾಸಕ ಪ್ರಭು ಚವ್ಹಾಣ ಸೂಚನೆ

ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಡಿಸೆಂಬರ್ 26ರಂದು ಔರಾದ ಪಟ್ಟಣ ಪಂಚಾಯತ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಔರಾದ(ಬಿ) ಪಟ್ಟಣ ಹಾಗೂ 6 ಗ್ರಾಮಗಳಿಗೆ ಕಾರಂಜಾ ಜಲಾಶಯದಿಂದ ನೀರು ಪೂರೈಸುವ ಯೋಜನೆ ಪ್ರಗತಿಯ ಕುರಿತು ಚರ್ಚಿಸಿದರು.

ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ನಗರ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಸಂಬAಧಿಸಿದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು, ಇನ್ನಾದರೂ ಕೆಲಸ ಚುರುಕುಗೊಳಿಸಬೇಕೆಂದು ನಿರ್ದೇಶನ ನೀಡಿದರು.

ಔರಾದ(ಬಿ) ಪಟ್ಟಣಕ್ಕೆ ಪ್ರತಿ ವರ್ಷ ಎದುರಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕೆಂಬ ಉದ್ದೇಶದಿಂದ ನಿರಂತರ ಪ್ರಯತ್ನ ವಹಿಸಿ ಸರ್ಕಾರದ ಮೇಲೆ ಒತ್ತಡ ತಂದು 84.82 ಕೋಟಿಯ ಯೋಜನೆಗೆ ಸರ್ಕಾರದಿಂದ ಮಂಜೂರಾತಿ ಪಡೆಯಲಾಗಿದೆ. ನಾನು ಸಾಕಷ್ಟು ಪ್ರಯತ್ನ ವಹಿಸಿ ಯೋಜನೆಯನ್ನು ತಂದಿದ್ದು, ಎಲ್ಲ ಕೆಲಸಗಳು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ಸೂಚಿಸಿದರು.

ಯೋಜನೆ ಟೆಂಡರ್ ಹಂತದಲ್ಲಿದ್ದು, ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕೆಲಸವನ್ನು ಶೀಘ್ರ ಆರಂಭಿಸಬೇಕು. ಇಲಾಖೆಯ ಹಂತದಲ್ಲಿ ಯಾವುದೇ ರೀತಿಯ ಕೆಲಸಗಳು ಬಾಕಿ ಇದ್ದಲ್ಲಿ ತಿಳಿಸಬೇಕು. ಸಂಬAಧಿಸಿದ ಸಚಿವರು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿ ಮಾಡಿಸಲಾಗುತ್ತದೆ. ಆದರೆ ಕೆಲಸವನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಕ್ಷೇತ್ರದ ಜನತೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಿಸಬಾರದು. ನೀರಿಗಾಗಿ ಬೀದಿ ಬೀದಿ ಅಲೆಯಬಾರದೆಂಬ ಉದ್ದೇಶದಿಂದ ಶಾಸಕನಾಗಿ ಆಯ್ಕೆಯಾದಾಗಿನಿಂದ ನಿರಂತರ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಕ್ಷೇತ್ರದಲ್ಲಿ 200 ಕೋಟಿಗೂ ಹೆಚ್ಚು ಮೊತ್ತದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಬಹುದಿನಗಳ ಕನಸು ಈಗ ಸಕಾರಗೊಳ್ಳುವ ದಿನಗಳು ಹತ್ತಿರ ಬಂದಿವೆ. ಕೆಲವು ದಿನಗಳಲ್ಲಿ ಔರಾದ ಪಟ್ಟಣಕ್ಕೂ ನಿರಂತರವಾಗಿ ನೀರು ಪೂರೈಕೆಯಾಗಲಿದೆ ಎಂದರು.

ಈ ಯೋಜನೆಯಡಿ ಔರಾದ(ಬಿ) ಪಟ್ಟಣ, ಹಾಲಹಳ್ಳಿ, ಠಾಣಾಕುಶನೂರ, ಹೆಡಗಾಪೂರ, ಚೌಧರಿ ಬೆಳಕುಣಿ, ಮಹಾಡೋಣಗಾಂವ ಹಾಗೂ ಮುಂಗನಾಳ ಗ್ರಾಮಗಳಿಗೆ ನೀರು ಸರಬರಾಜು ಆಗಲಿದೆ. ಜನತೆಯ ಬಹುಬೇಡಿಕೆಯ ಯೋಜನೆ ಇದಾಗಿದ್ದು, ಕಾಮಗಾರಿಯಲ್ಲಿ ಯಾವುದೇ ರೀತಿಯ ಲೋಪಗಳು ಆಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದರು.

ಕಾಮಗಾರಿ ಸ್ಥಳಕ್ಕೆ ಭೇಟಿ:ಕಾರಂಜಾ ಜಲಾಶಯದಿಂದ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡುವ ಯೋಜನೆಗೆ ಸಂಬAಧಿಸಿದAತೆ ಬೆಳಕುಣಿ(ಚೌ)ಯಲ್ಲಿನ ನೀರು ಶುದ್ದೀಕರಣ ಘಟಕ, ತೇಗಂಪೂರನಲ್ಲಿ ನಿರ್ಮಿಸ ಉದ್ದೇಶಿಸಿರುವ ಟ್ಯಾಂಕ್ ಸ್ಥಳ ಮತ್ತು ಬ್ಯಾಲಹಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಪಂಪ್ ಹೌಸ್ ಸ್ಥಳಕ್ಕೆ ಭೇಟಿ ನೀಡಿ ಯೋಜನೆಯ ಕುರಿತು ಅಧಿಕಾರಿಗಳಿಂದ ವಿವರಣೆ ಪಡೆದರು.

ಈ ವೇಳೆ ಅಧಿಕಾರಿಗಳು ಯೋಜನೆಯ ನೀಲನಕ್ಷೆಯನ್ನು ಶಾಸಕರ ಗಮನಕ್ಕೆ ತಂದರು. ಕಾಮಗಾರಿ ಯೋಜನೆಯಂತೆಯೇ ಆಗಬೇಕು. ಕಾಮಗಾರಿಗೆ ಅಡ್ಡಿಯಾಗಬಹುದಾದ ಎಲ್ಲ ಅಡೆತಡೆಗಳನ್ನು ಮುಂಚಿತವಾಗಿಯೇ ನಿವಾರಿಸಿಕೊಳ್ಳಬೇಕು. ಕೆಲಸ ಆರಂಭವಾದ ನಂತರ ಯಾವುದೇ ರೀತಿಯ ತೊಡಕುಗಳಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಸಮನ್ವತೆಯಿಂದ ಕೆಲಸ ಮಾಡಬೇಕು. ಗುತ್ತಿಗೆದಾರರಿಗೆ ಕೆಲಸ ವಹಿಸಿ ಕೈಕಟ್ಟಿ ಕುಳಿತುಕೊಳ್ಳದೆ ನಿರಂತರವಾಗಿ ಕಾಮಗಾರಿಯ ಮೇಲೆ ನಿಗಾ ವಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಾದ ನರಸಿಂಗ್ ರೆಡ್ಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವೀಂದ್ರ, ನಗರಸಭೆಯ ಮುಖ್ಯಾಧಿಕಾರಿ ಸ್ವಾಮಿದಾಸ, ಇಲಾಖೆಯ ಪ್ರೀತಿ ಹಕ್ಯಾಳೆ, ಎಪಿಎಂಸಿ ಅಧ್ಯಕ್ಷರಾದ ದೊಂಡಿಬಾ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಬನ್ಸಿ ನಾಯಕ್, ಸಂತೋಷ ಪೋಕಲವಾರ, ಕೇರಬಾ ಪವಾರ, ದಯಾನಂದ ಘೂಳೆ ಹಾಗೂ ಇತರರು ಉಪಸ್ಥಿತರಿದ್ದರು.

THG ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button