ಬಾಲಿವುಡ್ ನಟ ಸಲ್ಮಾನ್ ಖಾನ್ ನಿವಾಸದ ಹೊರಗಡೆ ಗುಂಡಿನ ದಾಳಿ ಪ್ರಕರಣ: 5ನೇ ಆರೋಪಿ ಬಂಧನ

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ ಶೂಟರ್‌ಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ರಾಜಸ್ಥಾನದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನನ್ನು ಮುಂಬೈ ಅಪರಾಧ ವಿಭಾಗ ಮಂಗಳವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಮೊಹಮ್ಮದ್ ರಫೀಕ್ ಚೌಧರಿ (37) ಎಂದು ಗುರುತಿಸಲಾಗಿದೆ. ಈತ ಗುಂಡಿನ ದಾಳಿ ಪ್ರಕರಣದಲ್ಲಿ ಬಂಧಿತರಾದ ಐದನೇ ವ್ಯಕ್ತಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏಪ್ರಿಲ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಬಂಧಿತ ವ್ಯಕ್ತಿಗಳ ವಿಚಾರಣೆಯಲ್ಲಿ ಚೌಧರಿ ಪಾತ್ರ ಬೆಳಕಿಗೆ ಬಂದಿದೆ. ಈತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಾಗಿದ್ದು, ಶೂಟರ್‌ಗಳಾದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದರು. ಪಾಲ್ ಮತ್ತು ಗುಪ್ತಾ ಅವರಿಗೆ ಬೈಕ್ ಖರೀದಿಸಲು ಮತ್ತು ಮನೆಯನ್ನು ಬಾಡಿಗೆಗೆ ನೀಡಲು ಹಣಕಾಸಿನ ನೆರವು ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗುಂಡಿನ ದಾಳಿ ಘಟನೆಗೂ ಮುನ್ನಾ ಚೌಧರಿ ನವಿ ಮುಂಬೈನ ಪನ್ವೆಲ್‌ಗೆ ಹೋಗಿ ಪಾಲ್ ಮತ್ತು ಗುಪ್ತಾ ಅವರೊಂದಿಗೆ ಇದ್ದರು. ಗುಂಡು ಹಾರಿಸುವ ಸಂಚು ರೂಪಿಸಿದಾಗಿನಿಂದ ಚೌಧರಿ ಆರೋಪಿಗಳಿಗೆ ಎಲ್ಲಾ ರೀತಿಯ ಬೆಂಬಲವನ್ನು ಒದಗಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಚೌಧರಿ ಇರುವಿಕೆಯ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದ ನಂತರ, ಅಪರಾಧ ವಿಭಾಗದ ತಂಡವನ್ನು ರಾಜಸ್ಥಾನಕ್ಕೆ ಕಳುಹಿಸಿ ಅವರನ್ನು ನಾಗೌರ್ ಜಿಲ್ಲೆಯಿಂದ ಬಂಧಿಸಲಾಯಿತು. ಖಾನ್ ಅವರ ನಿವಾಸದ ಹೊರಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇದುವರೆಗೆ ಐವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬನಾದ ಅನುಜ್ ಥಾಪನ್ ಮೇ 1 ರಂದು ಪೊಲೀಸ್ ಲಾಕ್‌ಅಪ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Latest Indian news

Popular Stories