ಉದ್ಧವ್ ಠಾಕ್ರೆ ಮೇಲೆ ಸುಳ್ಳು ಪ್ರಕರಣಕ್ಕೆ ಒತ್ತಡ: ದೇವೇಂದ್ರ ಫಡ್ನವೀಸ್ ವಿರುದ್ಧ ಅನಿಲ್ ದೇಶ್‌ಮುಖ್ ಗಂಭೀರ ‌ಆರೋಪ

ಮುಂಬಯಿ: ಮೂರು ವರ್ಷಗಳ ಹಿಂದೆ ಶಿವಸೇನಾ- ಎನ್‌ಸಿಪಿ- ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಆಗಿನ ಸಿಎಂ ಉದ್ಧವ್ ಠಾಕ್ರೆ ಹಾಗೂ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಮೂವರು ಇತರೆ ನಾಯಕರ ವಿರುದ್ಧ ಸುಳ್ಳು ಅಫಿಡವಿಟ್ ಸಲ್ಲಿಸುವಂತೆ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಆರೋಪಿಸಿದ್ದಾರೆ.

ಠಾಕ್ರೆ ಅವರ ವಿರುದ್ಧ ಸುಳ್ಳು ಅಫಿಡವಿಟ್‌ಗಳನ್ನು ಸಲ್ಲಿಸಿದರೆ ತಮ್ಮ ಮೇಲಿನ ಕೇಂದ್ರೀಯ ತನಿಖಾ ಸಂಸ್ಥೆಗಳ ತನಿಖೆಗೆ ತಡೆ ನೀಡುವುದಾಗಿ ಫಡ್ನವೀಸ್ ಆಫರ್ ಕೊಟ್ಟಿದ್ದರು ಎಂದಿದ್ದಾರೆ. ಈ ಆರೋಪಗಳನ್ನು ಮಹಾರಾಷ್ಟ್ರದ ಹಾಲಿ ಉಪ ಮುಖ್ಯಮಂತ್ರಿ ಫಡ್ನವೀಸ್ ತಳ್ಳಿಹಾಕಿದ್ದಾರೆ.

“ಮೂರು ವರ್ಷಗಳ ಹಿಂದೆ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಅನಿಲ ಪರಬ್ ಮತ್ತು ಅಜಿತ್ ಪವಾರ್ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವ ಅಫಿಡವಿಟ್ ಸಲ್ಲಿಸುವಂತೆ ದೇವೇಂದ್ರ ಫಡ್ನವೀಸ್ ನನಗೆ ಹೇಳಿದ್ದರು. ಆದರೆ ಅದಕ್ಕೆ ನಾನು ನಿರಾಕರಿಸಿದ್ದೆ. ಈ ಕಾರಣದಿಂದಲೇ ನನ್ನನ್ನು ಬಂಧಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅನ್ನು ಕಳುಹಿಸಲಾಗಿತ್ತು. ನನ್ನನ್ನು 13 ತಿಂಗಳು ಜೈಲಿನಲ್ಲಿ ಇರಿಸಲಾಗಿತ್ತು” ಎಂದು (ಎನ್‌ಸಿಪಿ) ಶರದ್‌ಚಂದ್ರ ಪವಾರ್ ಪಕ್ಷದ ನಾಯಕರಾಗಿರುವ ದೇಶ್‌ಮುಖ್ ಹೇಳಿದ್ದಾರೆ.

ಮುಂಬಯಿ ನಗರದಲ್ಲಿರುವ ಹೋಟೆಲ್ ಹಾಗೂ ಬಾರ್‌ ಮಾಲೀಕರಿಂದ ಹಣ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವರು ಸೂಚಿಸಿದ್ದು, ಮಾಸಿಕ 100 ಕೋಟಿ ರೂ ಸಂಗ್ರಹಣೆ ಮಾಡುವಂತೆ ಗುರಿ ನೀಡಿರುವುದಾಗಿ ಮುಂಬಯಿಯ ಆಗಿನ ಪೊಲೀಸ್ ಆಯುಕ್ತರು ಆರೋಪಿಸಿದ್ದರು. ಇದರ ಬಳಿಕ 2021ರ ಏಪ್ರಿಲ್‌ನಲ್ಲಿ ಗೃಹ ಸಚಿವ ಸ್ಥಾನಕ್ಕೆ ಅನಿಲ್ ದೇಶ್‌ಮುಖ್ ರಾಜೀನಾಮೆ ಸಲ್ಲಿಸಿದ್ದರು.

2021ರ ನವೆಂಬರ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಇಡಿ ಬಂಧಿಸಿತ್ತು. ನಂತರ ಭ್ರಷ್ಟಾಚಾರ ಪ್ರಕರಣದಲ್ಲಿ 2022ರ ಏಪ್ರಿಲ್‌ನಲ್ಲಿ ಸಿಬಿಐ ಬಂಧಿಸಿತ್ತು. ಬಾಂಬೆ ಹೈಕೋರ್ಟ್ ಜಾಮೀನು ನೀಡುವುದಕ್ಕೂ ಮುನ್ನ ಒಂದು ವರ್ಷಕ್ಕೂ ಹೆಚ್ಚು ಸಮಯ ಅವರು ನ್ಯಾಯಾಂಗ ಬಂಧನದಲ್ಲಿದ್ದರು.

Latest Indian news

Popular Stories