ಉ.ಕ | ವಿಕಲಚೇತನ ಮತದಾರರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ; ಜಿಲ್ಲಾಧಿಕಾರಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ 7 ರಂದು ನಡೆಯುವ ಮತದಾನದ ದಿನದಂದು ಜಿಲ್ಲೆಯ ಅರ್ಹ ವಿಕಲಚೇತನರಿಗೆ ಮತಗಟ್ಟೆಗೆ ಆಗಮಿಸಲು ಮತ್ತು ಮತಗಟ್ಟೆಯಿಂದ ಮನೆಗೆ ತೆರಳಲು ಜಿಲ್ಲಾಡಳಿದ ಮೂಲಕ ಉಚಿತ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ ವಿಶೇಷಚೇತನರ ಮತದಾನ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ತಪ್ಪದೇ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನ ಮಾಡಿ, ಪ್ರಜಾಪ್ರಭುತ್ವದ ದೊಡ್ಡ ಹಬ್ಬವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 15666 ವಿಶೇಷಚೇತನ ಮತದಾರರನ್ನು ಗುರುತಿಸಲಾಗಿದ್ದು, ಮನೆಯಿಂದ ಮತದಾನ ಮಾಡಲು ಬಯಸದೇ ಮತಗಟ್ಟೆಗೆ ಬಂದು ಮತದಾನ ಮಾಡುವ ವಿಶೇಷಚೇತನರಿಗೆ ಮತಗಟ್ಟೆಗೆ ಬರಲು ಮತ್ತು ಮತ ಚಲಾವಣೆ ನಂತರ ಪುನಃ ಮನೆಗೆ ತೆರಳಲು ವಾಹನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್‌ನ ವಿಆರ್‌ಡಬ್ಲು ಮತ್ತು ಎಮ್‌ಆರ್‌ಡಬ್ಲು ಮೂಲಕ ಬರುವ ವಾಹನ ಬೇಡಿಕೆ ಆಧಾರದ ಮೇಲೆ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಸ್ವಂತ ವಾಹನವಿದ್ದು ಅದರಲ್ಲಿ ಬಂದು ಮತ ಚಲಾಯಿಸುವ ವಿಕಲಚೇತನರಿಗೆ ಅವಶ್ಯವಿದ್ದಲ್ಲಿ ಅವರ ವಾಹನಕ್ಕೆ ಇಂಧನ ನೀಡುವ ವ್ಯವಸ್ಥೆ ಕೂಡಾ ಮಾಡಲಾಗುವುದು. ಹೆಚ್ಚಿನ ವಯೋ ವೃದ್ದತೆ ಅಥವಾ ವಿಕಲಚೇತನತೆಯಿಂದ ಯಾವುದೇ ಮತದಾರರು ಮತದಾನದಿಂದ ಹೊರಗುಳಿಯದಂತೆ ಜಿಲ್ಲಾಡಳಿತದ ಮೂಲಕ ಎಲ್ಲಾ ಸೌಲಭಗಳನ್ನು ಒದಗಿಸಲಾಗುತ್ತಿದೆ. ಸ್ವೀಪ್ ಸಮಿತಿ ವತಿಯಿಂದ ಕೂಡ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಮತದಾನ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಕಚೇರಿಯಿಂದ ಪ್ರರಂಭವಾದ ವಿಶೇಷಚೇತನರ ಬೈಕ್ ಜಾಥಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಅರ್ಜುನ ಚಿತ್ರಮಂದಿರ, ಕಾಳಿ ನದಿ ಉದ್ಯಾನವನ, ನಂದನಗದ್ದ ಟೋಲ್ ನಾಕಾ, ಶಿವಾಜಿ ಶಾಲೆ ರಸ್ತೆ, ಕಾಜುಭಾಗ- ಕಾರವಾರ ರಸ್ತೆ, ಡಾ.ಪಿಕಳೆ ರಸ್ತೆ ಮಾರ್ಗವಾಗಿ ಸಾಗಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್,  ಕನಿಷ್ಕ, ಜಿಲ್ಲಾ ಪಂಚಾಯತ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ಎಂ.ಸಿ ಚಂದ್ರಶೇಖರ, ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ 100 ಕ್ಕೂ ವಿಕಲಚೇತನರು ತಮ್ಮ ತ್ರಿಚಕ್ರ ವಾಹನಗಳೊಂದಿಗೆ ಭಾಗವಹಿಸಿದ್ದು, ಎಲ್ಲರಿಗೂ ಮತದಾರರ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.

….

Latest Indian news

Popular Stories