ಸುಳ್ಳು ಹೇಳುವಲ್ಲಿ ಮೋದಿಜಿ ಪ್ರವೀಣರು: ಸಿದ್ಧರಾಮಯ್ಯ

ವಿಜಯಪುರ : ಸುಳ್ಳು ಹೇಳುವಲ್ಲಿ ಮೋದಿಜಿ ಪ್ರವೀಣರು, ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಯಾರಾದರೂ ಇದ್ದರೆ ಅದು ಮಿಸ್ಟರ್ ನರೇಂದ್ರ ಮೋದಿ. ಸೋಲಿನ ಹತಾಶೆಯಿಂದ ಭಾವನಾತ್ಮಕ ವಿಚಾರ ಪ್ರಸ್ತಾಪಿಸುತ್ತಿದ್ದಾರೆ, ಹೊಸದಾಗಿ ಮುಸ್ಲಿಂರಿಗೆ ನಾವು ಮೀಸಲಾತಿ ನೀಡುತ್ತಿಲ್ಲ, ಈ ವಿಷಯವಾಗಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ವಿಜಯಪುರದ ಸೊಲ್ಲಾಪೂರ ರಸ್ತೆಯಲ್ಲಿರುವ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಹಾವನೂರ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಲು ಶಿಫಾರಸ್ಸು ಮಾಡಿದೆ, ಹೊಸದಾಗಿ ಯಾವ ರೀತಿಯ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ರಾಜ್ಯ ಸರ್ಕಾರ ನೀಡಿಲ್ಲ ಎಂದರು.
ಈ ಚುನಾವಣೆಯಲ್ಲಿ ಸೋಲುವುದು ಶತಸಿದ್ಧ ಎಂದು ಬಿಜೆಪಿ ನಾಯಕರಿಗೂ ಗೊತ್ತಾಗಿದೆ, ಸೋಲಿನ ಭೀತಿಯಿಂದಾಗಿ 400 ಸೀಟು ಜಪ ಮಾಡುತ್ತಿದೆ, ಭಾರತೀಯ ಸಂವಿಧಾನ ಬದಲಾವಣೆ ಮಾಡುವಗೋಸ್ಕರವೇ ಈ ಬಿಜೆಪಿ ಈ ಜಪ ಮಾಡುತ್ತಿದೆ, ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿ ಹಾಗೂ ಸಾಮಾಜಿಕ ನ್ಯಾಯದ ವಿರುದ್ಧವಾಗಿ ಇರುವವರು ಬಿಜೆಪಿ. ಅವರು ಯಾವತ್ತೂ ಸಂವಿಧಾನದ ಪರವಾಗಿ ಇಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಸಾಧನೆ ಉಲ್ಲೇಖಿಸಿ ಮತ ಕೇಳುತ್ತಿಲ್ಲ, ಕೇವಲ ಭಾವನಾತ್ಮಕ ವಿಚಾರ ಪ್ರಸ್ತಾಪಿಸಿ, ಭಾವನೆ ಕೆರಳಿಸಿ, ಧರ್ಮ-ಧರ್ಮ ಹಾಗೂ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ, ಹೆಚ್ಚು ಸ್ಥಾನ ಬರುವುದಿಲ್ಲ ಎಂದು ಗೊತ್ತಾಗಿ ನರೇಂದ್ರ ಮೋದಿ ಅವರು ಹತಾಶರಾಗಿ ಸಂಬಂಧಪಡದ ಅನೇಕ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ ಎಂದರು.
ಬೇರೆ ಧರ್ಮದವರ ಮೀಸಲಾತಿ ಕಸಿದುಕೊಂಡು ಮುಸ್ಲಿಂರಿಗೆ ಮೀಸಲಾತಿ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆ ಖಂಡನಾರ್ಹ, ಇದು ಪ್ರಧಾನಿ ಸ್ಥಾನಕ್ಕೆ ಚ್ಯುತಿ ತರುವ ಹೇಳಕೆಯಾಗಿದೆ ಎಂದು ಸಿದ್ಧರಾಮಯ್ಯ ಗರಂ ಆದರು.
ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದ ನರೇಂದ್ರ ಮೋದಿ ಅವರು 15 ಪೈಸೆ ಸಹ ಹಾಕಲಿಲ್ಲ, ರೈತರ ಆದಾಯ ದ್ವಿಗುಣಗೊಳಿಸುವ ವಾಗ್ದಾನ ನೀಡಿದರು, ಆದರೆ ರೈತರ ಖರ್ಚು ಹೆಚ್ಚಾಗಿದೆ ಹೊರತು ಅವರ ಆದಾಯ ಏರಿಕೆಯಾಗಿಲ್ಲ ಇದು ಮೋದಿ ಅವರ ಎರಡನೇಯ ಸುಳ್ಳು, ಅಚ್ಛೆ ದಿನ ಆಯೇಂಗೆ ಎಂದು ಬೆಲೆ ಏರಿಕೆ ಕಡಿವಾಣ ಹಾಕುವ ಭರವಸೆ ನೀಡಿದರು. ಆದರೆ ಯಾವ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಲಿಲ್ಲ, ಇದು ಮೋದಿ ಅವರು ಹೇಳಿದ ಮೂರನೇಯ ಸುಳ್ಳು, ಡಾ.ಸ್ವಾಮಿನಾಥನ್ ಆಯೋಗದ ವರದಿ ಸಹ ಜಾರಿ ಮಾಡಲಿಲ್ಲ, ಇದು ಮೋದಿ ಅವರ ಮತ್ತೊಂದು ಸುಳ್ಳು ಎಂದರು.
ರೈತರ ಸಾಲಮನ್ನಾ ಮಾಡಿ ಎಂದರೆ ದುಡ್ಡಿಲ್ಲ ಎಂದು ಹೇಳುವ ಬಿಜೆಪಿ, ಕೈಗಾರಿಕೋದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದರು. ಈ ಹಿಂದೆ ನಮ್ಮ ಪಕ್ಷದ ಸದಸ್ಯ ಉಗ್ರಪ್ಪ ಅವರು ಸಾಲಮನ್ನಾ ವಿಷಯವಾಗಿ ಪ್ರಶ್ನೆ ಮಾಡಿದಾಗ ರೈತರ ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ಬಳಿ ನೋಟ್ ಪ್ರಿಂಟ್ ಮಾಡುವ ಮಷೀನ್ ಇಲ್ಲ ಎಂದು ಉಡಾಫೆಯ ಮಾತುಗಳನ್ನು ಬಿಜೆಪಿಯ ಯಡಿಯೂರಪ್ಪ ಅವರು ಆಡಿದ್ದರು ಎಂದು ಸಿದ್ಧರಾಮಯ್ಯ ಮತ್ತೊಮ್ಮೆ ಉಲ್ಲೇಖಿಸಿದರು.

ಜಪ್ಪಯ್ಯ ಎಂದರೂ ರೈತರ ಸಮಸ್ಯೆ ಕೇಳುತ್ತಿಲ್ಲ…..
ಬೆಲೆ ಏರಿಕೆ ಕಡಿವಾಣ ಮಾಡಲು ವಿಫಲರಾಗಿರುವ ಮೋದಿಜಿ ಈ ವಿಷಯದ ಕುರಿತು, ನಿರುದ್ಯೋಗ, ರೈತರ ಸಮಸ್ಯೆಯ ಕುರಿತು ಮಾತನಾಡುವುದೇ ಇಲ್ಲ, ರೈತರು ಎಂಎಸ್‌ಪಿ ಮೊದಲಾದ ಬೇಡಿಕೆಗಳಿಗೆ ಸುದೀರ್ಘ ಹೋರಾಟ ನಡೆಸಿದರೂ ಸಹ ಮೋದಿಜಿ ಮಾತ್ರ ಜಪ್ಪಯ್ಯ ಎಂದರೂ ರೈತರ ಡಿಮ್ಯಾಂಡ್‌ಗಳಿಗೆ ಒಪ್ಪಿಕೊಂಡಿಲ್ಲ ಎಂದು ಸಿದ್ಧರಾಮಯ್ಯ ಮೋದಿ ವಿರುದ್ಧ ಅಸಮಧಾನ ಹೊರಹಾಕಿದರು.

ಬಿಜೆಪಿ ಸಂಸದರಿಗೆ ನಡುಕ
ಈ ಭಾಗದಿಂದ ಆಯ್ಕೆಯಾದ ಸಂಸದರು ಒಂದೇ ಒಂದು ಬಾರಿಯೂ ರಾಜ್ಯದ ಹಿತಾಸಕ್ತಿ ಪರವಾಗಿ ಮಾತನಾಡಲಿಲ್ಲ, ಏಕೆಂದರೆ ಅವರಿಗೆ ಮೋದಿ ಅವರನ್ನು ಕಂಡರೆ ನಡುಕವಿದೆ, ರಾಜ್ಯದ ಹಿತಾಸಕ್ತಿ ಕಾಪಾಡದೇ ಇರುವವರು ಲೋಕಸಭೆಗೆ ಹೋದರೆ ಏನೂ ಪ್ರಯೋಜನ, ಕರ್ನಾಟಕಕೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು ಲೋಕಸಭೆಗೆ ಹೋಗಬೇಕು ಎಂದರು.

Latest Indian news

Popular Stories