ವಿಜಯಪುರ | ಬಿಸಿಲಿಗೆ ಬೆದರಿದ ಮತದಾರರು: ವಿರಳ ಸರತಿ ಸಾಲು

ವಿಜಯಪುರ : ಜಿಲ್ಲೆಯಾದ್ಯಂತ 2086 ಮತಗಟ್ಟೆಗಳಲ್ಲಿ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣೆ ಯಾವುದೇ ರೀತಿ ಗೊಂದಲಗಳಿಲ್ಲದೇ ಮಂಗಳವಾರ ಸೂಸೂತ್ರವಾಗಿ ನಡೆಯಿತು. ಜಿಲ್ಲೆಯ ಮತದಾರರು ಕಣದಲ್ಲಿರುವ 08 ಜನ ಅಭ್ಯರ್ಥಿಗಳ ಭವಿಷ್ಯವನ್ನು ಬರೆದು ಮತಯಂತ್ರಗಳಲ್ಲಿ ಭದ್ರಪಡಿಸಿದರು. ಬೆಳಿಗ್ಗೆ ಉತ್ಸಾಹದ ಮತದಾನ ಕಂಡು ಬಂದರೆ, ಮಧ್ಯಾಹ್ನ ಬಿರುಬಿಸಿಲು ಮತದಾನಕ್ಕೆ ಅಡ್ಡಿ ಮಾಡಿತು. ಬಿರು ಬಿಸಿಲಿನಿಂದಾಗಿ ದೊಡ್ಡ ಪ್ರಮಾಣದ ಸರತಿ ಸಾಲು ಕಂಡು ಬರಲಿಲ್ಲ.


ಬೆಳಿಗ್ಗೆಯಿಂದಲೇ ಜಿಲ್ಲೆಯ ಬಹುತೇಕ ಮತಗಟ್ಟೆಗಳಲ್ಲಿ ಸಾಂಪ್ರದಾಯಿಕ ಸರತಿ ಸಾಲು ಎಲ್ಲೆಡೆ ಗೋಚರಿಸಿತು. ಪ್ರತಿಯೊಂದು ಮತದಾನ ಕೇಂದ್ರದ ಮುಂಭಾಗದಲ್ಲಿ ಕಣ್ಣು ಹಾಯಿಸಿದರೂ ಕಾರ್ಯಕರ್ತರ ದಂಡು, ಟೇಬಲ್ ಹಾಕಿಕೊಂಡು ಮತದಾರರ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ ಹುಡುಕಿ ಕೊಡುತ್ತಿರುವವರ ದಂಡು ಗೋಚರಿಸಿತು.


ಆಧುನಿಕ ತಂತ್ರಜ್ಞಾನ ಆಧರಿಸಿ ಹೆಸರು, ಎಪಿಕ್ ಸಂಖ್ಯೆ ಹೇಳಿದರೆ ನಿಮ್ಮ ಕ್ರಮ ಸಂಖ್ಯೆ, ಭೂತ್ಸಂಖ್ಯೆ ಎಂಬಿತ್ಯಾದಿ ವಿವರವುಳ್ಳ ಸಣ್ಣ ಫ್ರಿಂಟ್ ಔಟ್ ಸಿಗುವ ವ್ಯವಸ್ಥೆಯನ್ನು ಅನೇಕ ರಾಜಕೀಯ ಪಕ್ಷಗಳು ಮಾಡಿದ್ದವು. ನಿಷೇದಾಜ್ಞೆ ಹಿನ್ನೆಲೆಯಲ್ಲಿ ಅಣತಿ ದೂರದಲ್ಲಿಯೇ ತಂಡವೊಂದು ಟೇಬಲ್ ಹಾಕಿಕೊಂಡು ಈ ಕಾರ್ಯದಲ್ಲಿ ತೊಡಗಿರುವ ದೃಶ್ಯ ಎಲ್ಲೆಡೆ ಗೋಚರಿಸಿತು. ಈ ಬಾರಿ ವಿಶೇಷ ಎಂಬಂತೆ ಮತಗಟ್ಟೆ ಕೇಂದ್ರದಲ್ಲಿ ಮತದಾನ ಸಹಾಯ ಕೇಂದ್ರ ಸ್ಥಾಪಿಸಲಾಗಿತ್ತು.

ಬಿರುಬಿಸಿಲು : ಕಡಿಮೆಯಾದ ಸರತಿಸಾಲು
ವಿಜಯಪುರ ಜಿಲ್ಲೆಯಲ್ಲಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಈ ಬಿಸಿಲಿನ ಪ್ರಭಾವ ಮತದಾನ ಪ್ರಮಾಣ ಕಡಿಮೆ ಮಾಡಿತು. ಅತ್ತ ಸೂರ್ಯನ ಡಿಗ್ರಿ ಸೆಲ್ಸಿಯಸ್ ಅಧಿಕವಾಗುತ್ತಿದ್ದರೆ ಇತ್ತ ಮತದಾನ ಪ್ರಮಾಣ ಅದರಲ್ಲೂ ಮಧ್ಯಾಹ್ನ ಹೊತ್ತಲ್ಲಿ ಮತದಾನ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲೇ ಇಲ್ಲ. ಮಧ್ಯಾಹ್ನ ಮತದಾರರಿಲ್ಲದೇ ಮತಗಟ್ಟೆ ಕೇಂದ್ರಗಳು ಬಿಕೋ ಎನ್ನುತ್ತಿದ್ದವು. ಬಹುತೇಕ ಜನರು ಮಧ್ಯಾಹ್ನ 12 ರೊಳಗೆ ಮತಚಲಾಯಿಸಿ ಮನೆಗೆ ಮರಳಿದರು. ಮಧ್ಯಾಹ್ನ 2 ಗಂಟೆಯಿಂದ 4 ಗಂಟೆ ಹೊತ್ತಿಗೆ ಮತಗಟ್ಟೆಗಳ ಸುತ್ತ ವಿರಳ ಸಂಖ್ಯೆಯಲ್ಲಿ ಮತದಾರರು ಕಂಡು ಬಂದರು.

ಬೃಹತ್ ಶಾಮಿಯಾನ – ವ್ಹೀಲ್ ಚೇರ್ ವ್ಯವಸ್ಥೆ:
ವಿವಿಧ ಮತಗಟ್ಟೆ ಕೇಂದ್ರಗಳಲ್ಲಿ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ವಿಶೇಷಚೇತನ ಮತದಾರರಿಗೆ ಹಾಗೂ ಆರೋಗ್ಯ ಸಮಸ್ಯೆ ಎದುರಿಸುವ ಮತದಾರರಿಗೆ ಮತಗಟ್ಟೆ ಕೇಂದ್ರಕ್ಕೆ ಆಗಮಿಸಲು ಅನುಕೂಲವಾಗಲು ಎಲ್ಲ ಮತದಾನ ಕೇಂದ್ರಗಳಲ್ಲಿಯೂ ಭೂತ್ ಸಂಖ್ಯೆಗನುಗುಣವಾಗಿ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು.


ಆಟೋ ಮೊದಲಾದ ವಾಹನಗಳಲ್ಲಿ ಆಗಮಿಸುವ ಹಿರಿಯ ನಾಯಕರನ್ನು ವ್ಹೀಲ್ ಚೇರ್ ಮೂಲಕ ಭೂತ್ಗೆ ಕರೆತರುವ ದೃಶ್ಯ ಎಲ್ಲೆಡೆ ಕಂಡು ಬಂಧಿತು.


ವಿಜಯಪುರ ಜಿಲ್ಲೆಯಾದ್ಯಂತ ಸರಿಸುಮಾರು 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿರುವುದರಿಂದ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿಯೂ ಬೃಹತ್ ಶಾಮಿಯಾನ ಅಳವಡಿಸಲಾಗಿತ್ತು. ಸರತಿ ಸಾಲು ದೊಡ್ಡದಾದರೂ ಸಹ ಯಾವುದೇ ರೀತಿ ತೊಂದರೆಯಾಗದಂತೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಹಿರಿಯ ನಾಗರಿಕರ ಅದಮ್ಯ ಉತ್ಸಾಹ:
ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ವೋಟ್ ಮಾಡುವ ವ್ಯವಸ್ಥೆ ಮಾಡಲಾಗಿದ್ದರೂ ಸಹ ಅನೇಕ ಹಿರಿಯರು ಮತಗಟ್ಟೆಗೆಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.
ಹಿರಿಯ ನಾಗರಿಕರು ಅತ್ಯಂತ ಉತ್ಸಾಹ ಭರಿತರಾಗಿ ಮತದಾನ ಮಾಡಿದ್ದು ವಿಶೇಷವಾಗಿತ್ತು. ಅನೇಕ ಆರೋಗ್ಯ ಸಮಸ್ಯೆಗಳ ಮಧ್ಯೆಯೂ ಕುಟುಂಬಸ್ಥರ ಸಹಾಯ ಪಡೆದು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಯುವಕರಿಗೆ ಮತದಾನ ಮಾಡುವ ಸ್ಪೂರ್ತಿಯನ್ನು ಅನೇಕ ಹಿರಿಯರು ತುಂಬಿದ್ದು ಗಮನ ಸೆಳೆಯಿತು.


ಕೊಲ್ಹಾರ ತಾಲೂಕಿನ ತಳೇವಾಡ ಗ್ರಾಮದ ಮತಗಟ್ಟೆಯಲ್ಲಿ 105 ವರ್ಷ ವಯಸ್ಸಿನ ಅಜ್ಜಿ ಗಂಗಯ್ಯ ಬಸಯ್ಯ ವಸ್ತ್ರದ ಅವರು ಮತಚಲಾಯಿಸಿ ಗಮನ ಸೆಳೆದರೆ, ವಿಜಯಪುರ ನಗರದ 220 ಸಂಖ್ಯೆಯ ಮತಗಟ್ಟೆಯಲ್ಲಿ 90 ವರ್ಷದ ಪುಂಡಲೀಕ ಬಡಿಗೇರ ಹಾಗೂ 81 ವರ್ಷದ ಸೋನಾಬಾಯಿ ಬಡಿಗೇರ ದಂಪತಿ ಮತಚಲಾಯಿಸಿ ಯುವಕರಿಗೆ ಸ್ಪೂರ್ತಿ ತುಂಬಿದರೆ, ವಿಜಯಪುರದ ಅಲ್-ಅಮಾನ್ ಶಾಲೆಯ ಮತಗಟ್ಟೆಯಲ್ಲಿ 93 ವರ್ಷದ ಹಿರಿಯಜ್ಜಿ ಗಂಗಾಬಾಯಿ ಕುಲಕರ್ಣಿ ಮತಚಲಾಯಿಸಿ ಗಮನ ಸೆಳೆದರು.

ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಿಷಿ ಆನಂದ, ಚುನಾವಣೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿಗಳಾದ ಸಂಸದ ರಮೇಶ ಜಿಗಜಿಣಗಿ, ಪ್ರೊ.ರಾಜು ಆಲಗೂರ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಅನೇಕ ಗಣ್ಯರು ಸಹ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.

ಪೊಲೀಸ್ ಭದ್ರಕೋಟೆ:
ಪ್ರತಿ ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಂಡು ಬಂದಿತು. ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಸ್ತçಸಜ್ಜಿತ ಪ್ಯಾರಾ ಮಿಲಟರಿ ಪಡೆಯನ್ನು ನಿಯೋಜಿಸಲಾಗಿತ್ತು. ಪೊಲೀಸ್ ಹಾಗು ಹೋಂ ಗಾರ್ಡ್ ಸಿಬ್ಬಂದಿ ಸಹ ಇದ್ದರು.
ಪೊಲೀಸ್ ಅಧಿಕಾರಿಗಳು ಕಾಲಕಾಲಕ್ಕೆ ಪೆಟ್ರೋಲಿಂಗ್ ವಾಹನಗಳ ಮೂಲಕ ಭೂತ್ಗಳಿಗೆ ಭೇಟಿ ನೀಡಿ ಅಲ್ಲಿನ ಸುರಕ್ಷತೆಗಳನ್ನು ಪರಿಶೀಲನೆ ನಡೆಸಿದರು. ಅನೇಕ ಹಿರಿಯ ಅಧಿಕಾರಿಗಳು ಭೂತ್ನಲ್ಲಿಯೇ ಇದ್ದುಕೊಂಡು ಸುರಕ್ಷತೆಯ ಮೇಲುಸ್ತುವಾರಿ ವಹಿಸಿದ್ದು ಕಂಡು ಬಂದಿತು.

Latest Indian news

Popular Stories