ತಿರುಪತಿ ಪ್ರಸಾದದಲ್ಲಿ ಕಲಬೆರಕೆ ತುಪ್ಪ ಮಿಶ್ರಣ ಅಕ್ಷಮ್ಯ ಅಪರಾಧ ರಾಜಕೀಯ ಪಕ್ಷಗಳ ಕಪಿಮುಷ್ಟಿಯಿಂದ ದೇವಸ್ಥಾನ, ಮಠಗಳನ್ನು ಮುಕ್ತಗೊಳಿಸಿ: ಪುತ್ತಿಗೆ ಸ್ವಾಮೀಜಿ

ಉಡುಪಿ, ಸೆ.21: ಹಿಂದೂ ಧರ್ಮೀಯರ ಅತ್ಯಂತ ಪ್ರಮುಖ ಶ್ರದ್ಧಾಕೇಂದ್ರ ತಿರುಪತಿಯ ಶ್ರೀವೇಂಕಟೇಶ್ವರ ದೇವರ ಪರಮ ಪಾವನವಾದ ನೈವೇದ್ಯ ಪ್ರಸಾದದಲ್ಲಿ ಕಲಬೆರಕೆಯ ತುಪ್ಪವನ್ನು ಮಿಶ್ರಣ ಮಾಡುವ ಮೂಲಕ ದೊಡ್ಡ ಅಪಚಾರವನ್ನು ಮಾಡಲಾಗಿದೆ. ಈ ಮೂಲಕ ಬಹು ದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಿದ್ದು ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯ ಅಪರಾಧವಾಗಿದೆ ಎಂದು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ದೇವಸ್ಥಾನ ಮತ್ತು ಮಠ ಮಂದಿರಗಳ ಮೇಲೆ ನಿರಂತರವಾಗಿ ನಡೆಯುತ್ತಿ ರುವ ಆಕ್ರಮಣಗಳನ್ನು ಶಾಶ್ವತವಾಗಿ ತಡೆಯಬೇಕಾಗಿದೆ. ಇದಕ್ಕಾಗಿ ರಾಜಕೀಯ ಪಕ್ಷಗಳ ಕಪಿಮುಷ್ಟಿಯಿಂದ ದೇವಸ್ಥಾನ ಮತ್ತು ಮಠ ಮಂದಿರಗಳನ್ನು ಮುಕ್ತಗೊಳಿಸಬೇಕು. ಸನಾತನ ಧರ್ಮದ ಸಂರಕ್ಷಣೆಗಾಗಿ ರಾಷ್ಟ್ರ ಮಟ್ಟದಲ್ಲಿ ಸಂತರ ಪೀಠಾಧಿಪತಿಗಳ ನೇತೃತ್ವದ ಮಾರ್ಗದರ್ಶಕ ಮಂಡಳಿಯನ್ನು ರಚಿಸ ಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಅವರು ಆಗ್ರಹಿಸಿದರು.

ತಿರುಪತಿಯಲ್ಲಿ ನಡೆದಿರುವ ಅಪಚಾರವನ್ನು ತೀರ್ವವಾಗಿ ಖಂಡಿಸಿ ಧರ್ಮ ಸಂಸತ್ ಅನ್ನು ರಚಿಸಿ ಆ ಮೂಲಕ ರಾಜಕೀಯ ಪಕ್ಷಗಳ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು ಎಂದು ಶ್ರೀಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದರು

Latest Indian news

Popular Stories