ದ.ಕ | ರಾಜ್ಯ ಸರಕಾರದ ಯೋಜನೆಯಡಿ ಅಪಘಾತದಲ್ಲಿ ಮೃತಪಟ್ಟ ಡೆಲಿವರಿ ಬಾಯ್‌ಗೆ 4 ಲಕ್ಷ ರೂ. ಪರಿಹಾರ ವಿತರಣೆ


ಮಂಗಳೂರು: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಂದ ಮಂಗಳೂರಿನಲ್ಲಿ ವಾಹನ ಅಪಘಾತದಿಂದ ಸಾವನ್ನಪ್ಪಿದ ಸ್ವಿಗ್ಗಿ ಡೆಲಿವರಿ ಬಾಯ್‍ಗೆ ರೂ. 4ಲಕ್ಷ ಗಳ ವಿಮಾ ಪರಿಹಾರ ವಿತರಿಸಲಾಯಿತು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಂದಿಗುಡ್ಡ ಫಸ್ಟ್ ಕ್ರಾಸ್ ಬಳಿ ವಾಸವಾಗಿದ್ದ ಮೃತ ಅರ್ಜುನ್ ಪೂಜಾರ್ (21) ಸ್ವಿಗ್ಗಿ ಡೆಲಿವರಿ ವೃತ್ತಿ ಮಾಡಿಕೊಂಡಿದ್ದು, 2024 ಫೆಬ್ರವರಿ 24ರಂದು ಬಿಜೈ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಕುಂಟಿಕಾನ ಕಡೆಗೆ ಫುಡ್ ಡೆಲಿವರಿ ಮಾಡಲು ತೆರಳುತ್ತಿರುವಾಗ ಜಯಲಕ್ಷ್ಮೀ ಬಟ್ಟೆ ಶೋರೂಂ ಬಳಿ ರಸ್ತೆ ಅಪಘಾತವಾಗಿ ಗಂಭೀರ ಗಾಯಗೊಂಡು ಫೆಬ್ರವರಿ 26ರಂದು ಮೃತ ಪಟ್ಟಿರುತ್ತಾರೆ.

ಮೃತ ಅರ್ಜುನ್ ಪೂಜಾರ್ ಫೆಬ್ರವರಿ 14 ರಂದು ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯಡಿ ಗುರುತಿನ ಚೀಟಿ ಪಡೆದುಕೊಂಡಿದ್ದರು. ಮೃತರ ತಂದೆ ಮಾಡಿಗಪ್ಪ ಪೂಜಾರ್ ಅವರು ವಿಮಾ ಪರಿಹಾರಕ್ಕಾಗಿ ದ.ಕ ಕಾರ್ಮಿಕ ಅಧಿಕಾರಿ ದ.ಕ ಉಪವಿಭಾಗ-1 ಕಛೇರಿಗೆ ಅರ್ಜಿ ಸಲ್ಲಿಸಿದ್ದರು.ಸೆಪ್ಟೆಂಬರ್ 19ರಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ರೂ.4 ಲಕ್ಷಗಳ ವಿಮಾ ಪರಿಹಾರವನ್ನು ಮೃತರ ತಂದೆಗೆ ವಿತರಿಸಿದರು.

Latest Indian news

Popular Stories