ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಸೀದಿಗೆ ತೆರಳಿದ್ದ ವೇಳೆ ಚಿನ್ನಾಭರಣ ಕಳ್ಳತನ

ಬಂಟ್ವಾಳ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಸೀದಿಗೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು ಮಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಿಯಲ್ಲಿ ‌‌ಸೆ.16 ರಂದು ನಡೆದಿದೆ.

ಮಂಚಿ ಗ್ರಾಮದ ಮೋಂತಿಮಾರು ನಿವಾಸಿ ಆಸ್ಮಾ ಎಂಬುವವರ ಮನೆಯಿಂದ ಕಳ್ಳತನ ನಡೆದಿದೆ.

‌‌ಸೆ.16ರ ಸೋಮವಾರ ಬೆಳಿಗ್ಗೆ ಈದ್ ಮಿಲಾದ್ ‌ಹಬ್ಬದ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಮನೆಗೆ ಬೀಗ ಹಾಕಿ ಮಸೀದಿಗೆ ತೆರಳಿದ್ದ ವೇಳೆ ಈ ಕಳ್ಳತನ ನಡೆದಿದೆ ಎನ್ನಲಾಗಿದೆ.ರಾತ್ರಿ 12.45 ಗಂಟೆಗೆ ಮಸೀದಿಯಿಂದ ವಾಪಸು ಮನೆಗೆ ಬಂದು ನೋಡಿದಾಗ ಮನೆಯ ಹಿಂಬದಿಯ ಕಿಟಕಿಯ 2 ಸರಳುಗಳನ್ನು ತುಂಡು ಮಾಡಿ ಮನೆಯ ಒಳಗೆ ಪ್ರವೇಶ ಮಾಡಿ, ಬೆಡ್ ರೂಮಿನಲ್ಲಿರುವ ಕಪಾಟು ಬೀಗ ತೆಗೆದು ಅದರೊಳಗೆ ಇರಿಸಿಲಾಗಿದ್ದ ಸುಮಾರು1 ಲಕ್ಷ 33 ಸಾವಿರ ರೂ ಮೌಲ್ಯದ ಚಿನ್ನ ಹಾಗೂ ನಗದು ಕಳವು ಮಾಡಲಾಗಿದೆ.

ರೂ.72 ಸಾವಿರ ಮೌಲ್ಯದ ಅರ್ಧ ಪವನ್ ತೂಕದ ಚಿನ್ನದ ಸರ, ರೂ. 24 ಸಾವಿರ ಮೌಲ್ಯದ ಅರ್ಧ ಪವನ್ ಚಿನ್ನದ ಉಂಗುರ, ರೂ.12 ಸಾವಿರ ಮೌಲ್ಯದ 2 ಗ್ರಾಂ ತೂಕದ ಬ್ರಾಸ್ ಲೈಟ್ ಹಾಗೂ 25 ಸಾವಿರ ರೂ ನಗದನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್. ಐ.ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ.

Latest Indian news

Popular Stories