ಬಂಟ್ವಾಳ: ಯುವಕರ ತಲವಾರು ಕಾಳಗ: ಇಬ್ಬರ ಸ್ಥಿತಿ ಗಂಭೀರ

ಮಂಗಳೂರು: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಎರಡು ಯುವಕರ ತಂಡ ತಡರಾತ್ರಿ ತಲವಾರು ಕಾಳಗ ನಡೆಸಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ದ‌.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಗಾಯಗೊಂಡ ಯುವಕರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಲವಾರು ದಾಳಿಯಲ್ಲಿ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಎಂಬಿಬ್ಬರು ಯುವಕರ ಸ್ಥಿತಿ ಗಂಭೀರವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ನಿವಾಸಿಗಳಾದ ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ತಲವಾರು ದಾಳಿ ನಡೆದಿದ್ದು, ಮುಸ್ತಾಫ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾರ್, ಯಾಸೀರ್, ಸುಹೈಲ್, ಝಾಹೀದ್, ಸಾದಿಕ್, ಲತೀಫ್ ತಲವಾರು ದಾಳಿ ನಡೆಸಿದ ಆರೋಪಿಗಳು ಎಂದು ಹೇಳಲಾಗುತ್ತಿದೆ.

ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಆರೋಪಿಗಳು ತಸ್ಲೀಂಗೆ ಫೋನ್ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ ಅಮ್ಮೆಮಾ‌ರ್ ಶಾಲೆ ಬಳಿ ಬರುವಂತೆ ಸವಾಲೆಸೆದಿದ್ದರು ಎನ್ನಲಾಗಿದೆ. ಅದರಂತೆ ತಸ್ಲಿಮ್ ಅಲ್ಲಿಗೆ ಶಾಕಿ‌ರ್ ಎಂಬಾತನೊಂದಿಗೆ ತೆರಳಿದ್ದು, ಈ ವೇಳೆ ಪಲ್ಟಿ ಇಮ್ರಾನ್ ಮತ್ತು ತಂಡ ತಲವಾರಿನಿಂದ ತಸ್ಲೀಮ್ ಮತ್ತು ಮಹಮ್ಮದ್ ಶಾಕೀರ್‌ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು,ತಸ್ಲೀಮ್ ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಕುರಿತು ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories