ಯಾವುದೇ ಷರತ್ತಿಲ್ಲದೆ ರಾಜಕೀಯ ಜೀವನ ಪ್ರಾರಂಭ ಮಾಡಿದ್ದ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ – ಸಿ ಪಿ ಯೋಗೇಶ್ವರ್

“ಯಾವುದೇ ಷರತ್ತಿಲ್ಲದೆ ರಾಜಕೀಯ ಜೀವನ ಪ್ರಾರಂಭ ಮಾಡಿದ್ದ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ” ಎಂದು ಚನ್ನಪಟ್ಟಣ ಉಪಚುನಾವಣೆಯ ಸಂಭಾವ್ಯ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯ ಬಳಿಕ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡ ಬಳಿಕ ಡಿಕೆಶಿ ಅವರನ್ನು ಕಾಂಗ್ರೆಸ್ ಪಕ್ಷದ ಬಾವುಟ ನೀಡಿ, ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

ಬಳಿಕ ಮಾತನಾಡಿದ ಯೋಗೇಶ್ವರ್, “ನನ್ನ ರಾಜಕೀಯ ಜೀವನವನ್ನು ಡಿ.ಕೆ. ಶಿವಕುಮಾ‌ರ್ ನೇತೃತ್ವದಲ್ಲಿ ಆರಂಭಿಸಿದ್ದೆ. ಹಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ನಾವು ಕಟ್ಟಿದ ಮನೆಯಲ್ಲಿ ನಾವು ವಾಸ ಮಾಡಲು ಆಗುವುದಿಲ್ಲ. ಜೆಡಿಎಸ್ ಜೊತೆ ಮೈತ್ರಿಯಾದ ಬಳಿಕ ನನ್ನ ರಾಜಕೀಯ ಬೆಳವಣಿಗೆಗೆ ಪೂರಕ ವಾತಾವರಣವಿಲ್ಲ ಅಂದುಕೊಂಡೆ. ಜೆಡಿಎಸ್ ಜೊತೆಗೆ ಮೈತ್ರಿಯಿಂದ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಹಾಗಾಗಿ, ಯಾವುದೇ ಷರತ್ತು ಇಲ್ಲದೇ ಮತ್ತೆ ಕಾಂಗ್ರೆಸ್ ಸೇರಿದ್ದೇನೆ” ಎಂದು ಪಕ್ಷ ಬದಲಾಯಿಸಿದ್ದಕ್ಕೆ ಸಮರ್ಥನೆ ನೀಡಿದರು.

“ಡಿ.ಕೆ. ಶಿವಕುಮಾ‌ರ್ ಅವರನ್ನು ಮಂಗಳವಾರ ರಾತ್ರಿ ಭೇಟಿಯಾಗಿ ಚರ್ಚಿಸಿದೆ ಎಂಬುದೆಲ್ಲಾ ಕೆಲವೊಂದು ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ್ದೇನೆ. ಅದೆಲ್ಲವೂ ಸುಳ್ಳು. ಇಂದು ಬೆಳಗ್ಗೆ ನೇರವಾಗಿ ಶಿವಕುಮಾರ್ ನಿವಾಸಕ್ಕೆ ತೆರಳಿದೆ. ನಂತರ ಮುಖ್ಯಮಂತ್ರಿ ನಿವಾಸಕ್ಕೂ ಹೋಗಿದ್ದೆ. ಆ ಮೂಲಕ, ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಬಂದಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನಮ್ಮ ರಾಮನಗರ ಜಿಲ್ಲೆ ಹಾಗೂ ಚನ್ನಪಟ್ಟಣವನ್ನು ಮತ್ತಷ್ಟು ಅಭಿವೃದ್ಧಿ ಮಾಡುವುದೇ ಉದ್ದೇಶ” ಎಂದು ತಿಳಿಸಿದರು.

“ಡಿ.ಕೆ ಶಿವಕುಮಾ‌ರ್, ರಾಮಲಿಂಗಾ ರೆಡ್ಡಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಯಲ್ಲಿ ಪಾಲುದಾರನಾಗಬೇಕೆಂದು ಈ ನಿರ್ಧಾರ ಮಾಡಿದೆ. ಆನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಡಿ ಕೆ ಸುರೇಶ್ ಅವರು ಪ್ರಮುಖ ಕಾರಣರು” ಎಂದು ಯೋಗೇಶ್ವರ್ ತಿಳಿಸಿದರು.

ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ ಮಾತನಾಡಿ, “ಸಿ ಪಿ ಯೋಗೇಶ್ವರ್ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಪಕ್ಷಕ್ಕೆ ಬಲ ಬಂದಿದೆ. ಜನರಲ್ಲಿ ಯೋಗೇಶ್ವರ್ ಬಗ್ಗೆ ಉತ್ತಮ ಅಭಿಪ್ರಾಯ ಇದೆ” ಎಂದರು.

ಸಚಿವರಾದ ಜಮೀರ್ ಅಹ್ಮದ್ ಖಾನ್ ಮಾತನಾಡಿ, “ಸಿ ಪಿ ವೈ ಪಕ್ಷ ಸೇರ್ಪಡೆಯಿಂದ ನಮಗೆ ಹಳೆ ಮೈಸೂರು ಭಾಗದಲ್ಲಿ ಆನೆ ಬಲ ಬಂದಂತಾಗಿದೆ. ಕಾರ್ಯಕರ್ತರು ಇದನ್ನು ಬಯಸುತ್ತಿದ್ದರು. ಇದು ಘರ್ ವಾಪ್ಸಿಯಾಗಿದೆ. ಹಳೆ ಮೈಸೂರು ಭಾಗದಲ್ಲಿ ಆನೆ ಬಲ ಬಂದಿದೆ” ಎಂದು ಖುಷಿ ವ್ಯಕ್ತಪಡಿಸಿದರು.

Latest Indian news

Popular Stories