ಗ್ರಾಹಕರಿಗೆ ತೂಕದಲ್ಲಿ ಭಾರೀ ಮೋಸ: ಚಿನ್ನಾಭರಣ ಮಳಿಗೆಗಳಿಗೆ ಬೀಗ ಜಡಿದ ಅಧಿಕಾರಿಗಳು

ಮಂಡ್ಯ: ಗ್ರಾಹಕರಿಗೆ ತೂಕದಲ್ಲಿ ಮೋಸ ಮಾಡಿದ ಚಿನ್ನಾಭರಣ ಮಳಿಗೆಗಳಿಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಗ್ರಾಹಕರಿಗೆ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಮೂರು ಆಭರಣ ಮಳಿಗೆಗಳಿಂದ ತೂಕದ ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ರಾಜ್ಯ ಆಹಾರ ಆಯೋಗದ ಸದಸ್ಯರ ತಂಡ ಗುರುವಾರ ವಶಕ್ಕೆ ಪಡೆದಿದ್ದು, ಮಳಿಗೆಗಳಿಗೆ ಬೀಗ ಜಡಿದಿದೆ.

ಪಟ್ಟಣದ ಮಹಾಲಕ್ಷ್ಮಿ ಬ್ಯಾಂಕರ್ ಅಂಡ್ ಜುವೆಲ್ಲರ್ಸ್, ಮಹೇಂದ್ರ ಜುವೆಲ್ಲರ್ಸ್ ಮತ್ತು ಲಕ್ಷ್ಮಿ ಜುವೆಲ್ಲರ್ಸ್ ಮಾಲೀಕರಿಗೆ ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಮಳಿಗೆಗಳಲ್ಲಿದ್ದ ತೂಕದ ಯಂತ್ರಗಳಲ್ಲಿ ಒಂದರಿಂದ ಒಂದೂವರೆ ಗ್ರಾಂನಷ್ಟು ವ್ಯತ್ಯಾಸ ಬರುತ್ತಿತ್ತು. ಒಂದು ಗ್ರಾಂ ಚಿನ್ನದ ಮಾರುಕಟ್ಟೆ ಮೌಲ್ಯ ಪ್ರಸ್ತುತ 7000ರೂ. ಇದ್ದು ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ವಂಚನೆ ಆಗುತ್ತಿತ್ತು.

ಅಲ್ಲದೇ, ಚಿನ್ನಾಭರಣ ಮಳಿಗೆಗೆ ಪರವಾನಿಗೆ ಪಡೆದುಕೊಳ್ಳದೇ ಮತ್ತು ನವೀಕರಣ ಮಾಡಿಸಿಕೊಳ್ಳದ ಕಾರಣ ಸೇರಿದಂತೆ ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ನಿಯಮಿತವಾಗಿ ಪರಿಶೀಲಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ರಾಜ್ಯ ಆಹಾರ ಆಯೋಗ ಸೂಚನೆ ನೀಡಿದೆ.

Latest Indian news

Popular Stories