ಮನೋರೋಗಗಳಿಗೆ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದರೆ ರೋಗ ಗುಣಪಡಿಸಬಹುದು: ಡಾ. ಮಂಜುನಾಥ

WhatsApp Image 2023 10 10 at 5.07.22 PM Vijayapura, Featured Story, Health, State News

ವಿಜಯಪುರ: ಮನೋರೋಗಗಳ ಬಗ್ಗೆ ಜಾಗೃತಿ ಮೂಡಿಸಿ ಈ ಕಾಯಿಲೆಯಿಂದ ಬಳಲುವವರಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ನೀಡಿದರೆ ರೋಗವನ್ನು ಗುಣಪಡಿಸಬಹುದು ಎಂದು ಜಿಲ್ಲಾ ಆರೋಗ್ಯ ಕೇಂದ್ರದ ಮಾನಸಿಕ ಆರೋಗ್ಯ ವಿಭಾಗದ ಡಾ. ಮಂಜುನಾಥ ಮಸಳಿ ಹೇಳಿದರು.

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಶುಶ್ರೂಷ ಮಹಾವಿದ್ಯಾಲಯ ಮತ್ತು ಜಿಲ್ಲಾ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮಾನಸಿಕ ಆರೋಗ್ಯ- ಇದು ಪ್ರತಿಯೊಬ್ಬನ ಹಕ್ಕು ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಇಂದಿನ ಅಧುನಿಕ ಜೀವನದಲ್ಲಿ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವು ಮುಖ್ಯವಾಗಿದೆ. ನಮ್ಮ ಸುತ್ತಮುತ್ತಲಿನ ಅನೇಕ ವ್ಯಕ್ತಿಗಳು ಒಂದಿಲ್ಲೊಂದು ಮಾನಸಿಕ ರೋಗದಿಂದ ಬಳಲುತ್ತಿರುತ್ತಾರೆ. ಅದನ್ನು  ಹೊರಗಡೆ ಹೇಳಲಾಗದ ನೋವು ಒಂದೆಡೆಯಾದರೆ, ಇದು ಅನಿಷ್ಟ ಎಂಬ ಮನೋವೇದೆನಯಿಂದ ಬಳಲುತ್ತಿರುತ್ತಾರೆ. ಹೀಗಾಗಿ ಮನೋರೋಗಗಳಿಂದ ಗುಣಮುಖರಾಗದೇ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಹೀಗಾಗಿ ಕೆಲವರು ಆತ್ಮಹತ್ಯೆಗೂ ಮುಂದಾಗುತ್ತಾರೆ. ಇಂಥ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ ಅವರನ್ನು ಮಾನಸಿಕ ಕಾಯಿಲೆಗಳಿಂದ ಗುಣಪಡಿಸಬಹುದಾಗಿದೆ ಎಂದು ಅವರು ಹೇಳಿದರು.

ಮಾನಸಿಕ ರೋಗಗಳ ಕುರಿತು ಸಮಾಜದ ಎಲ್ಲ ವಿದ್ಯಾವಂತರು ನಿರಂತರವಾಗಿ ಜಾಗೃತಿ ಮೂಡಿಸುವ ಮೂಲಕ ರೋಗಗಳನ್ನು ತಡೆಗಟ್ಟುವ ಪ್ರಯತ್ನವನ್ನು ಮಾಡಬೇಕಾಗಿದೆ. ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಮಾನಸಿಕ ರೋಗ ತಜ್ಞರು ಲಭ್ಯರಿದ್ದು, ಈ ಸಮಸ್ಯೆಯಿಂದ ಬಳಲುವವರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವರನ್ನು ಮತ್ತೆ ಮೊದಲಿನ ರೀತಿ ಸಾಮಾನ್ಯ ಮನುಷ್ಯರನ್ನಾಗಿ ಮಾಡಬಹುದಾಗಿದೆ. ಮನೋರೋಗ ಸಂಬಂಧಿ ಯಾವುದೇ ಸಮಸ್ಯೆಗಳಿದ್ದರೆ ಸಹಾಯವಾಣಿ ಸಂಖ್ಯೆ 14416 ಸಂಪರ್ಕಿಸಬಹುದು ಎಂದು ಡಾ. ಮಂಜುನಾಥ ಮಸಳಿ ಹೇಳಿದರು.

ಇದಕ್ಕೂ ಮುಂಚೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ವಿಶ್ವ ಮಾನಸಿಕ ಆರೋಗ್ಯದ ಜಾಗೃತ ಜಾಥಾವನ್ನು ಜಿಲ್ಲಾ ನ್ಯಾಯಾಧೀಶ ಸಂತೋಷ ಕುಂದರ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಚಾಲನೆ ನೀಡಿದರು. ವಿಜಯಪುರ ನಗರದ ನಾನಾ ಮಾರ್ಗಗಳಲ್ಲಿ ಸಂಚರಿಸಿದ ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು, ವೈದ್ಯರು ಹಾಗೂ ಅಧ್ಯಾಪಕರು ಮನೋರೋಗಗಳ ಕುರಿತು ಜನಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ ಚೂಪಡೆ, ವಿಭಾಗದ ಮುಖ್ಯಸ್ಥ ನಜೀರ್ ಬಳಗಾರ, ಡಾ. ಬಶೀರ್ ಅಹ್ಮದ್ ಸಿಕಂದರ್, ಡಾ. ಅಮಿತ ಕುಮಾರ ಬಿರಾದಾರ, ಅಪ್ಪನಗೌಡ ಪಾಟೀಲ, ಸೋಮೇಶ ದಿಂಡೂರ, ರೇಷ್ಮಾ ಚವ್ಹಾಣ, ರೇಷ್ಮಾ ಗಣವಾರಿ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories