ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ,ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

ರಾಯಚೂರು: ಮುಡಾ ಹಗರಣಕ್ಕೆ ಸಂಬಂಧಿಸಿ ವಿಪಕ್ಷದ ಬಿಜೆಪಿ-ಜೆಡಿಎಸ್‌ ನಾಯಕರು ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡುವುದು ಮಾತ್ರವಲ್ಲದೇ ಈ ಪ್ರಕರಣದಲ್ಲಿ ನನ್ನ ಪತ್ನಿ ಹೆಸರು ಎಳೆದು ತರುತ್ತಿದ್ದಾರೆ. ಆದರೆ ನನ್ನ ಪತ್ನಿ ಯಾವತ್ತೂ ಮನೆಯಿಂದ ಆಚೆ ಬಂದು ರಾಜಕಾರಣದ ಕಡೆ ಮುಖವೂ ಮಾಡದ, ಯಾವ ವಿಷಯಕ್ಕೂ ತಲೆ ಹಾಕದ ನನ್ನ ಪತ್ನಿಯನ್ನೂ ಬಿಜೆಪಿಯವರು ದ್ವೇಷ ರಾಜಕಾರಣಕ್ಕೆ ಎಳೆದು ತಂದ್ರಲ್ಲಾ ಇದನ್ನು ನೀವು ಕ್ಷಮಿಸುತ್ತೀರಾ?

ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜನರಲ್ಲಿ ಪ್ರಶ್ನಿಸಿದರು.

ಎರಡನೇ ಬಾರಿ ಸಿಎಂ ಆಗಿದ್ದಕ್ಕೆ ಬಿಜೆಪಿಗೆ ಹೊಟ್ಟೆಕಿಚ್ಚು
ಜಿಲ್ಲೆಯ ಮಾನ್ವಿಯಲ್ಲಿ ಶನಿವಾರ ₹458.42. ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಶೋಷಿತ, ದಮನಿತ, ಶೂದ್ರ ಜನ ಸಮುದಾಯಗಳ ಸ್ವಾಭಿಮಾನಿ ಸಮಾವೇಶ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿ ನಾನು ಏನು ತಪ್ಪು ಮಾಡಿದ್ದೀನಿ? ಕುರಿ ಕಾಯುವವರ ಮಗ ಎರಡನೇ ಬಾರಿ ಸಿಎಂ ಆಗಿದ್ದೇ ತಪ್ಪಾ? ಐದೈದು ಗ್ಯಾರಂಟಿಗಳು, ಹತ್ತಾರು ಭಾಗ್ಯಗಳ ಜಾರಿಗೆ ತಂದಿದ್ದೇ ತಪ್ಪಾ? ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ನನ್ನ ಪತ್ನಿಯನ್ನು ರಾಜಕೀಯಕ್ಕೆ ಎಳೆದು ತರಬೇಕಿತ್ತಾ? ಅವರು ಏನು ತಾನೆ ತಪ್ಪು ಮಾಡಿದ್ದರು? ಎಂದು ಪ್ರಶ್ನಿಸಿದರು.

ಬಿಜೆಪಿ-ಜೆಡಿಎಸ್ ನ ಸುಳ್ಳು ಮತ್ತು ಕಪಟ ಷಡ್ಯಂತ್ರಕ್ಕೆ ತಕ್ಕ ಪಾಠ ಕಲಿಸಲು ಸಿದ್ಧರಾಗಿ. ಕಾರಣವೇ ಇಲ್ಲದೇ ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ ಎನ್ನುತ್ತಿದ್ದಾರೆ. ನನಗೂ ಬೇಸರ ಆಗಿದೆ, ಸಾಕಾಗಿದೆ. ಆದರೆ, ನಿಮಗಾಗಿ ನಾನು ಹೋರಾಟ ಮುಂದುವರಿಸಿದ್ದೇನೆ. ನಾನು ಅವರ ಬೆದರಿಕೆಗಳಿಗೆ ಜಗ್ಗೋನೂ ಅಲ್ಲ, ಬಗ್ಗೋನೂ ಅಲ್ಲ. ಇಲ್ಲಿಯೇ ಇದ್ದು ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದರು.

ಅಭಿವೃದ್ಧಿ ವಿಚಾರದಲ್ಲಿ ನಾವೇ ಮುಂದು:
ಇನ್ನು ರಾಜ್ಯದ ಅಭಿವೃದ್ಧಿ ವಿಷಯಕ್ಕೆ ಬಂದರೆ ನಾವೇ ಹೆಚ್ಚು ಕೆಲಸಗಳ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಪರವಾಗಿದೆ. ವಿರೋಧ ಪಕ್ಷಗಳು ಸುಮ್ಮನೇ ಆರೋಪ ಮಾಡುತ್ತಾರೆ. ಸರ್ಕಾರದ ಬಳಿ ದುಡ್ಡು ಇಲ್ಲ ಅಂದರೆ ನಮಗೆ 1,695 ಕೋಟಿ ರೂ.ಹಾಕಿ ರಸ್ತೆ ನಿರ್ಮಿಸಲಾಗುತ್ತಿತ್ತಾ ? ಇದನ್ನೆಲ್ಲ ಸಹಿಸಿಕೊಳ್ಳಲು ಆಗದೇ ನನ್ನ ಮೇಲೆ ಹಾಗೂ ನಮ್ಮ ಸರಕಾರದ ಮೇಲೆ ಸುಳ್ಳು ಆರೋಪಿಸಲು ಶುರು ಮಾಡಿದ್ದಾರೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

ಈ ಸ್ವಾಭಿಮಾನ ಸಮಾವೇಶಕ್ಕೆ ರವಿ ಬೋಸರಾಜು ಮತ್ತು ಅವರ ತಂಡ ಬಹಳ ಶ್ರಮಪಟ್ಟಿದೆ. ಬೋಸರಾಜು ಮತ್ತು ಇತರೆ ಶಾಸಕರಿಗೆ ನನ್ನ ಧನ್ಯವಾದಗಳು. ರಾಜ್ಯದಲ್ಲಿ ದೇವರಾಜ್ ಅರಸು ಬಿಟ್ಟರೇ ನಾನು ಮಾತ್ರ ಐದು ವರ್ಷ ಪೂರ್ಣಗೊಳಿಸಿದ್ದೇನೆ. ಅಷ್ಟೇ ಅಲ್ಲ ರಾಜ್ಯವು ಮುಕ್ತ ರಾಜ್ಯ ಆಗಬೇಕು ಅಂತ ಅನ್ನಭಾಗ್ಯ ಯೋಜನೆ ಮಾಡಿದೆ. ಬಡವರಿಗೆ ಅನುಕೂಲವಾಗಲು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Latest Indian news

Popular Stories