ವಿದೇಶಿಗರ ಬಂಧನ – ಕೇಂದ್ರೀಯ ಏಜೆನ್ಸಿಗಳ ವೈಫಲ್ಯ : ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಪಾಕಿಸ್ತಾನ ಪ್ರಜೆ ಸೇರಿದಂತೆ ವಿದೇಶಿಗರು ಬೆಂಗಳೂರಿಗೆ ಬಂದು ಪಾಸ್​​ಪೋರ್ಟ್​ ಮಾಡಿಕೊಳ್ಳುತ್ತಾರೆ ಅಂದ್ರೆ ಎಲ್ಲೋ ಒಂದು ಕಡೆ ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದರ್ಥವಲ್ಲವೇ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪ್ರಜೆ ಬೆಂಗಳೂರಿನಲ್ಲಿ ವಾಸವಾಗಿರುವ ವಿಷಯ ತಿಳಿದ ಕೂಡಲೇ ನಮ್ಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ, ಉಳಿದವರನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದರು.

ನಕಲಿ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರದಿಂದ 4 ಮಂದಿಯನ್ನು ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ರಾ, ಐಬಿ ಮತ್ತು ಇತರ ಕೇಂದ್ರೀಯ ಸಂಸ್ಥೆಗಳನ್ನು ಹೊಂದಿದ್ದಾರೆ, ಅವರು ಈ ವಿಷಯಗಳ ಮೇಲೆ ನಿಗಾ ಇಡಬೇಕು. ವಿದೇಶಿಗರು ಬೆಂಗಳೂರಿಗೆ ಹೇಗೆ ತಲುಪಿದರು, ಪಾಸ್ ಪೋರ್ಟ್ ಹೇಗೆ ಪಡೆದರು ಎಂದು ತಿಳಿಯಬೇಕು. ಪಾಸ್‌ಪೋರ್ಟ್‌ಗಳು, ಕೇಂದ್ರೀಯ ಏಜೆನ್ಸಿಗಳ ವೈಫಲ್ಯವನ್ನು ತೋರಿಸುತ್ತದೆ, ಇಲ್ಲಿರುವ ಕೆಲವು ಪಾಕಿಸ್ತಾನಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಎಂದರು.

ಸಚಿವ ಸತೀಶ್​ ಜಾರಕಿಹೊಳಿ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಸಂಸದೆಯಾಗಿದ್ದಾರೆ.

ಪುತ್ರಿಗೆ ಕ್ವಾರ್ಟರ್ಸ್ ಬೇಕು ಅನ್ನೋ ಕಾರಣಕ್ಕೆ ದೆಹಲಿಗೆ ಹೋಗಿದ್ದರು. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಭೇಟಿ ಮಾಡಿದ್ದಾರೆ. ಜಮ್ಮು-ಕಾಶ್ಮೀರ ಚುನಾವಣಾ ರ್ಯಾಲಿಯಲ್ಲಿ ಖರ್ಗೆ ಅವರು ಅಸೌಖ್ಯಕ್ಕೀಡಾಗಿದ್ದರು. ಆರೋಗ್ಯ ವಿಚಾರಿಸಲು ಖರ್ಗೆ ಅವರನ್ನು ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ ಎಂದು ತಿಳಿಸಿದರು.

ಮುಡಾ ಹಗರಣ ಸಂಬಂಧ ಬಿಜೆಪಿ ಎರಡನೇ ಹಂತದ ಹೋರಾಟ ನಡೆಸಲು ಮುಂದಾಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು ಪ್ರತಿಪಕ್ಷದವರು ಸರ್ಕಾರಕ್ಕೆ ಸಲಹೆ ಸೂಚನೆ ಕೊಡಬೇಕು. ಇದನ್ನು ಬಿಟ್ಟು ಅವರು ರಾಜಕಾರಣ ಮಾಡುತ್ತಿದ್ದಾರೆ. ಮುಡಾ ಹಗರಣ ತನಿಖೆಗೆ ನ್ಯಾಯಾಲಯ ಆದೇಶ ನೀಡಿದೆ, ತನಿಖೆ ನಡೆಯುತ್ತಿದೆ. ಇಡಿ ನೋಟಿಸ್ ಕೊಟ್ಟಿದೆ. ಇದನ್ನು ರಾಜಕಾರಣಕ್ಕೆ ಉಪಯೋಗಿಸುತ್ತಿದ್ದಾರೆ. ಸರ್ಕಾರ ಸಮರ್ಥವಾಗಿದೆ ಪ್ರತ್ಯುತ್ತರ ಕೊಡುತ್ತೇವೆ ಎಂದರು.

Latest Indian news

Popular Stories