ಬಡವರ BPL ಕಾರ್ಡ್ ರದ್ದು ಪಡಿಸದಂತೆ ಆಗ್ರಹಿಸಿ ಜೋರಾದ ಪ್ರತಿಭಟನೆ

ಚಾಮರಾಜನಗರ, ಅಕ್ಟೋಬರ್‌ 24: ಸರ್ಕಾರಿ ನೌಕರರು, ತೆರಿಗೆ ಪಾವತಿಸುವವರನ್ನು ಹೊರತು ಪಡಿಸಿ ಉಳಿದ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಪಡಿಸದಂತೆ ಆಗ್ರಹಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆದಿದೆ. ಚಾಮರಾಜನಗರದ ಭುವನೇಶ್ವರಿ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ಪರಿಶೀಲನೆ ಹಾಗೂ ತಿದ್ದುಪಡಿ ನಡೆಯುತ್ತಿದ್ದು, ಇದರಿಂದ ಅನೇಕರಿಗೆ ಈ ತಿಂಗಳ ಪಡಿತರ ಅಕ್ಕಿಯನ್ನು ತಡೆಹಿಡಿಯಲಾಗಿದೆ. ಅಲ್ಲದೇ ಅನೇಕ ಬಡವರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಪಡಿಸಲಾಗುತ್ತಿದೆ. ಇದರಿಂದ ಬಡ ವರ್ಗದವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ವೇಳೆ ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರ ಒಂದು ಕಡೆ 5 ಗ್ಯಾರಂಟಿಗಳನ್ನು ನೀಡಿ ಜನರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ, ಮತ್ತೊಂದು ಕಡೆ ಜನರಿಗೆ ಅಗತ್ಯವಿರುವ ಬಿಪಿಎಲ್ ಕಾರ್ಡ್‌ಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರಿ ನೌಕರರು ಹಾಗೂ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ ಉಳಿದ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಣೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ ಅವರು ಕಳೆದ ನಾಲೈದು ದಿನಗಳಿಂದಲೂ ಸರ್ವರ್ ಸಮಸ್ಯೆಯಿಂದಾಗಿ ನ್ಯಾಯ ಬೆಲೆ ಅಂಗಡಿಗಳ ಮುಂದೆ ಜನರು ಕ್ಯೂನಲ್ಲಿ ನಿಂತಿದ್ದಾರೆ. ಕೂಲಿ ಕೆಲಸ ಬಿಟ್ಟು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ವರ್ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಾ.ಮುರುಳಿ, ಚಾ.ವೆಂ. ರಾಜಗೋಪಾಲ್, ಚಾ.ಸಿ. ಸೋಮನಾಯಕ, ನಿಜಧ್ವನಿ ಸಿ.ಎನ್. ಗೋವಿಂದರಾಜು, ಚಾ.ರಾ.ಕುಮಾರ್, ಮಹೇಶ್ಗೌಡ, ಪಣ್ಯದಹುಂಡಿ ರಾಜು, ಆಟೋ ಲಿಂಗರಾಜು, ಸಿದ್ದರಾಜು, ನಂಜುಂಡಶೆಟ್ಟಿ, ವೀರಭದ್ರ, ತಾಂಡವಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

Latest Indian news

Popular Stories