ಬೆಂಗಳೂರು: ವಾಹನ ಸವಾರರೇ ಗಮನಿಸಿ, ಈ ರಸ್ತೆಯಲ್ಲಿ ಭಾನುವಾರದ ವರೆಗೆ ಸಂಚಾರ ನಿರ್ಬಂಧ

ಬೆಂಗಳೂರು, ಆಗಸ್ಟ್ 15: ರೈಲ್ವೇ ಯು ಗಾರ್ಡ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 14 ರಿಂದ 18 ರವರೆಗೆ ಬೆಂಗಳೂರಿನ ದೊಡ್ಡಾನೆಕುಂದಿ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಹೊರ ವರ್ತುಲ ರಸ್ತೆಯಿಂದ ಎಚ್‌ಎಎಲ್ ಅಥವಾ ದೊಡ್ಡಾನೆಕುಂದಿ ಕಡೆಗೆ ಪ್ರಯಾಣಿಸುವ ವಾಹನ ಸವಾರರು ಕಾರ್ತಿಕ್ ನಗರ ಜಂಕ್ಷನ್‌ನಲ್ಲಿ ಯು-ಟರ್ನ್ ತೆಗೆದುಕೊಳ್ಳಬಹುದು. ದೊಡ್ಡಾನೆಕುಂದಿ ಅಥವಾ ಎಚ್‌ಎಎಲ್​ನಿಂದ ಹೊರ ವರ್ತುಲ ರಸ್ತೆ ಕಡೆಗೆ ಹೋಗುವವರು ಇಸ್ರೋ ರಸ್ತೆಯನ್ನು ಬಳಸಿಕೊಂಡು ಕಾರ್ತಿಕ್ ನಗರ ಜಂಕ್ಷನ್‌ನಲ್ಲಿ ಎಡಕ್ಕೆ ಚಲಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 19 ರಿಂದ ಆರಂಭವಾಗಿ ನಗರದಿಂದ ಹೊರಹೋಗುವ ಎಲ್ಲಾ ಅಂತಾರಾಜ್ಯ ಖಾಸಗಿ ಬಸ್‌ಗಳು ಹೆಬ್ಬಾಳ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಲು ಮತ್ತು ಇಳಿಸಲು ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ.

ಪ್ರಯಾಣಿಕರು ಜಕ್ಕೂರು ಏರೋಡ್ರೋಮ್ ಬಳಿಯ ಬಳ್ಳಾರಿ ರಸ್ತೆಯ ಸರ್ವೀಸ್ ರಸ್ತೆಗೆ ಪ್ರಯಾಣಿಸಬೇಕು, ಅಲ್ಲಿಂದ ಅಲ್ಲಾಳಸಂದ್ರ ಎನ್‌ಇಎಸ್ ಕಡೆಗೆ ತೆರಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಮಾಣ ಕಾರ್ಯಗಳು ಮತ್ತು ಕಿರಿದಾದ ರಸ್ತೆಯ ಕಾರಣದಿಂದಾಗಿ ಹೆಬ್ಬಾಳ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡಲು ಈ ಕ್ರಮ ಅನಿವಾರ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕ್ರಮದಿಂದ ಜನರಿಗೆ ತಾತ್ಕಾಲಿಕವಾಗಿ ತೊಂದರೆಯಾಗಲಿದೆ. ಆದರೆ, ಸ್ಥಳೀಯ ನಿವಾಸಿಗಳ ಬೇಡಿಕೆಯ ಕಾರಣ ಈ ಕ್ರಮ ಕೈಗೊಳ್ಳದೆ ಬೇರೆ ಆಯ್ಕೆಗಳಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Latest Indian news

Popular Stories