ಉಡುಪಿ: ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ – ಅಕ್ಕಿ ಇದ್ದರೂ ಕ್ಯೂನಲ್ಲಿ ನಿಂತು ಹೈರಾಣದ ಗ್ರಾಹಕರು!

ಉಡುಪಿ: ರಾಜ್ಯ ಸರಕಾರ ವಿತರಿಸುವ ಪಡಿತರ ಪಡೆಯಲು ಜನ ಕಾದು ಕಾದು ಸುಸ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲಸ ಕಾರ್ಯ ಬಿಟ್ಟು ಪಡಿತರ ವಿತರಣೆಯ ನ್ಯಾಯ ಬೆಲೆ ಅಂಗಡಿಯ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅವಸ್ಥೆ.

ಪಡಿತರ ವಿತರಣೆಯ ಸಂದರ್ಭದಲ್ಲಿ ಉಂಟಾಗುವ ಸರ್ವರ್ ಸಮಸ್ಯೆಯಿಂದಾಗಿ ಬೆರಳಚ್ಚು ಪಡೆಯಲು ಹರ ಸಾಹಸ ಪಡುವಂತಾಗಿದೆ. ಇದರಿಂದ ನ್ಯಾಯಬೆಲೆ ಅಂಗಡಿಯ ಎದುರು ಗ್ರಾಹಕರು ಪ್ರತಿ ನಿತ್ಯ ಸರತಿ ಸಾಲಿನಲ್ಲಿ ನಿಲ್ಲಬೇಕಾದ ವಾತಾವರಣ ಇದೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್‌ ಪಾಯಿಂಟ್‌ ಆಪ್‌ ಸೇಲ್‌ (ಇ-ಪಿಒಎಸ್‌) ಯಂತ್ರಗಳ ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್‌ಲೈನ್‌ ವ್ಯವಸ್ಥೆಗೆ ಇಲಾಖೆ ನೂತನ ಸರ್ವರ್‌ ಅಳವಡಿಸಿದೆ. ಅದರ ದೋಷದಿಂದಾಗಿ ರಾಜ್ಯಾದ್ಯಂತ ಸಾರ್ವಜನಿಕರ ಪಡಿತರ ವಿತರಣೆ ವ್ಯವಸ್ಥೆ ಹಳ್ಳಹಿಡಿದಂತಾಗಿದೆ.

ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಮುಂಚಿನ ವ್ಯವಸ್ಥೆಯಂತೆ ಪಡಿತರ ವಿತರಣೆಗೆ ಬಯೋಮೆಟ್ರಿಕ್‌ ಹಾಗೂ ಮೊಬೈಲ್‌ ಒಟಿಪಿ ಮೂಲಕ ಗ್ರಾಹಕರಿಗೆ ಪಡಿತರ ವಿತರಣೆ ಆಗುತ್ತಿತ್ತು. ಇದೀಗ ಮೊಬೈಲ್‌ ಒಟಿಪಿ ಸಂಪೂರ್ಣ ಬಂದ್‌ ಆಗಿದೆ. ಬಯೋಮೆಟ್ರಿಕ್‌ ಕಾರ್ಯ ಎನ್‌ಐಸಿಯಿಂದ ನಿರ್ವಹಿಸಲಾಗುತ್ತಿತ್ತು. ಇದೀಗ ಕರ್ನಾಟಕ ಸ್ಟೇಟ್‌ ಡಾಟಾ ಸೆಂಟರ್‌ಗೆ ನೂತನ ಸರ್ವರ್‌ ಅಳವಡಿಸಿದ್ದೇ ಇಷ್ಟೇಲ್ಲ ಸಮಸ್ಯೆಗೆ ಕಾರಣ ಎನ್ನಲಾಗಿದೆ.

ರಾಜ್ಯದಲ್ಲಿ 20,464 ನ್ಯಾಯಬೆಲೆ ಅಂಗಡಿಗಳಿವೆ. 1 ಕೋಟಿ 50 ಲಕ್ಷಕ್ಕೂ ಹೆಚ್ಚು ಪಡಿತರ ಕಾರ್ಡ್‌ಗಳಿದ್ದು, ಇಲಾಖೆ ವೆಬ್‌ಸೈಟ್‌ನಲ್ಲೇ ನೀಡಿದ ಮಾಹಿತಿಯಂತೆ ಅ.21ರವರೆಗೆ ಶೆ.30ರಷ್ಟು ಪಡಿತರ ಕಾರ್ಡ್‌ಗಳಿಗೆ ಮಾತ್ರ ಪಡಿತರ ವಿತರಣೆಯಾಗಿದೆ. ಈ ತಿಂಗಳ ಅ.31ರವರೆಗೆ ಪಡಿತರ ಪಡೆಯಲು ಅವಕಾಶವಿದೆ.

Latest Indian news

Popular Stories