ಮಂಗಳೂರು: ಉಳ್ಳಾದ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣ ಆರೋಪ ಹೊತ್ತು ನ್ಯಾಯಾಲಯದಿಂದ ಖುಲಾಸೆಯಾಗಿದ್ದ ರೌಡಿಶೀಟರ್ ಕಡಪ್ಪರ ಸಮೀರ್‌ನನ್ನು ದುಷ್ಕರ್ಮಿಗಳ ತಂಡವೊಂದು ಅಟ್ಟಾಡಿಸಿ ಕೊಲೆಗೈದ ಘಟನೆ ನಗರದ ಹೊರವಲಯದ ಕಲ್ಲಾಪುನಲ್ಲಿ ನಡೆದಿದೆ.
ತನ್ನ ತಾಯಿ ಜೊತೆ ಹೊಟೇಲ್‌ಗೆ ಕಾರಿನಲ್ಲಿ ಬಂದಿದ್ದ ಸಮೀರ್‌ನನ್ನು ದುಷ್ಕರ್ಮಿಗಳ ತಂಡ ಕಾರಿನಲ್ಲಿ ಹಿಂಬಾಲಿಸುತ್ತಾ ಬಂದಿತ್ತು ಎನ್ನಲಾಗಿದೆ. ಸಮೀರ್ ಹೊಟೇಲ್ ಮುಂದೆ ಕಾರಿನಿಂದ ಇಳಿಯುತ್ತಿದ್ದಂತೆ ತಂಡ ಮಾರಕಾಯುಧಗಳಿಂದ ಹಲ್ಲೆ ನಡೆಸಿತ್ತು. ಅಪಾಯ ಅರಿತ ಸಮೀರ್ ಓಡಿ ಬಚಾವಾಗಲು ಯತ್ನಿಸಿದ್ದು, ತಂಡ ಸುಮಾರು 500 ಮೀಟರ್ ವರೆಗೆ ಅಟ್ಟಾಡಿಸಿ ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.
ಕೂಡಲೇ ದುಷ್ಕರ್ಮಿಗಳ ತಂಡ ಪರಾರಿಯಾಗಿದ್ದು, ಸಮೀರ್ ಕೂಡಾ ಅಲ್ಲಿಂದ ನಾಪತ್ತೆಯಾಗಿದ್ದ. ಈ ವೇಳೆ ಸಮೀರ್ ಓಡಿ ಬಚಾವಾಗಿರಬಹುದೆಂದು ಜನ ತಿಳಿದಿದ್ದರು. ಆದರೆ ಘಟನೆ ನಡೆದ ಅನತಿ ದೂರದಲ್ಲಿ ಸಮೀರ್ ಮೃತದೇಹ ಪತ್ತೆಯಾಗಿತ್ತೆಂದು ಹೇಳಲಾಗಿದೆ.
ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಸಮೀರ್ ಮತ್ತು ಜೊತೆಗಿದ್ದವರು ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರು. ಕೊಲೆ, ಕೊಲೆಯತ್ನ, ಶೂಟೌಟ್, ದರೋಡೆ ಮೊದಲಾದ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸಮೀರ್ ಇತ್ತೀಚೆಗಷ್ಟೇ ದರೋಡೆ ಪ್ರಕರಣ ಸಂಬಂಧ ಜೈಲು ಸೇರಿ, ಜಮೀನಿನಲ್ಲಿ ಹೊರ ಬಂದಿದ್ದ.