ಶಾಸಕ ಮುನಿರತ್ನ ಪ್ರಕರಣ:ನಿಂದನೆ ತಪ್ಪು, ಕ್ರಮ ಆಗಲಿ: ನಿರ್ಮಲಾನಂದನಾಥ ಶ್ರೀ

ಬೆಂಗಳೂರು: ವೈರಲ್‌ ಆಗಿರುವ ಆಡಿಯೋ ಕೇಳಿಸಿಕೊಂಡಿದ್ದೇನೆ. ತಾಯಂದಿರ ಕುರಿತ ಅವಾಚ್ಯ ಮಾತುಗಳಿವೆ. ಇದು ಕೇವಲ ಒಕ್ಕಲಿಗ ಅಥವಾ ದಲಿತ ಸಮುದಾಯದವರ ಬಗ್ಗೆ ಮಾತನಾಡಿದ್ದಾರೆ ಅನ್ನುವುದಲ್ಲ. ಸಮಾಜದ ಪ್ರತಿಯೊಂದು ಜನಾಂಗದವ ರೂ ಮುಖ್ಯ. ಹಾಗಾಗಿ, ಯಾರೇ ಮಾತನಾಡಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ.

ಬಿಜೆಪಿ ಶಾಸಕ ಮುನಿರತ್ನ ಅವರ ಜಾತಿ ನಿಂದನೆಯ ಆಡಿಯೋ ವೈರಲ್‌ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ವಾಮೀಜಿಗಳು, ಈಗಾಗಲೇ ಆಡಿಯೋ ಧ್ವನಿ ಪರೀಕ್ಷೆಗೆ ಕಳಿಸಿಕೊಡಲಾಗಿದೆ ಅಂತ ಗೊತ್ತಾಗಿದೆ. ಅವರು (ಮುನಿರತ್ನ) ಮಾತನಾಡಿದ್ದಾರೋ ಇನ್ನೊಬ್ಬರು ಮಾತನಾಡಿದ್ದಾರೋ ಎಂಬುದು ಗೊತ್ತಾಗುತ್ತದೆ. ಯಾರೇ ಮಾತನಾಡಿದ್ದರೂ ಇಂದಿನ ನಾಗರಿಕ ಸಮಾಜದಲ್ಲಿ ಅದನ್ನು ಒಪ್ಪತಕ್ಕಂತಹ ವಿಚಾರವಲ್ಲ ಎಂದು ಹೇಳಿದ್ದಾರೆ.

ಮಾತನಾಡಿದವರು ಯಾರೇ ಆದರೂ ಸೂಕ್ತವಾಗಿರುವಂತಹ ನಿರ್ಧಾರ ಹಾಗೂ ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಮಾತನಾಡಿದವರನ್ನು ಕ್ಷಮಿಸಲು ಸಾಧ್ಯವಿಲ್ಲ. ಅದು ಕೇವಲ ಒಕ್ಕಲಿಗ ಅಥವಾ ದಲಿತ ಸಮುದಾಯಕ್ಕೆ ಮಾತನಾಡಿದ್ದಾರೆ ಅನ್ನುವುದಲ್ಲ. ಒಟ್ಟು ಸಮಾಜದಲ್ಲಿರುವ ಪ್ರತಿಯೊಂದು ಜನಾಂಗದವ ರೂ ಬಹು ಮುಖ್ಯವಾಗಿದ್ದಾರೆ.ಪ್ರತಿಯೊಂದು ಜನಾಂಗವನ್ನೂ ನಮ್ಮ ಸಂವಿಧಾನ ಒಪ್ಪಿಕೊಂಡಿದೆ. ಅದರಲ್ಲೂ ಬಹುಮುಖ್ಯವಾಗಿ ದೇಶದ ಅಸ್ಮಿತೆ ಎಂದರೆ ನಮ್ಮ ತಾಯಂದಿರು. ಅದಕ್ಕೆ ನಮ್ಮ ದೇಶವನ್ನು ಭಾರತ ಮಾತೆ ಎಂದು ಕರೆಯುತ್ತಾರೆ.

ಕ್ಷಮಿಸಲು ಅರ್ಹವಲ್ಲದ ವಿಚಾರ
ರಾಮನಗರದಲ್ಲಿ ಉರಿಗೌಡ-ನಂಜೇಗೌಡ ವಿಚಾರವಾಗಿ ಸಿನಿಮಾ ಮಾಡುತ್ತಿದ್ದ ವಿಚಾರಕ್ಕೆ ಕರೆದು ಮುನಿರತ್ನಗೆ ಬುದ್ಧಿ ಹೇಳಿದ್ದೆ. ಆಗ ಅವರು ಅದನ್ನು ನಿಲ್ಲಿಸಿದ್ದರು. ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಮುದ್ರಣದ ವಿಚಾರದಲ್ಲಿ ನಿಜ ಆಯ್ತು ಅಂದರೆ, ಯಾರು ಮಾತನಾಡಿದ್ದಾರೋ ಅವರಿಗೆ ಖಂಡಿತಾ ಕ್ಷಮಿಸಲು ಅರ್ಹವಲ್ಲದಾಗಿರುವಂತಹ ವಿಚಾರ. ಒಕ್ಕಲಿಗ ಸಮುದಾಯ ಅಥವಾ ಇನ್ನೊಂದು ಸಮುದಾಯದ ತಾಯಂದಿರು ಅಂತಲ್ಲ. ಇಡೀ ಸಮಾಜದ ನಮ್ಮ ತಾಯಂದಿರ ಬಗ್ಗೆ ಮಾತನಾಡಿರೋದು ಸರಿಯಲ್ಲ ಎಂದು ಹೇಳಿದರು.

ನಾಗಮಂಗಲದಲ್ಲಿ ನಡೆದ ಗಲಭೆ ಕುರಿತು ಮಾತನಾಡಿದ ಶ್ರೀಗ ಳು, ನಾಗಮಂಗಲ ಶಾಂತಿಯಿಂದ ಈಗಾಗಲೇ ಕೂಡಿದೆ. ಇದ್ದಕ್ಕಿದ್ದಂತೆ ಅಂತಹ ಘಟನೆ ನಡೆದಿರುವಂತದ್ದು ನೋವಿನ ಸಂಗತಿ. ಸಾಮಾನ್ಯವಾಗಿ ಹಿಂದೂ, ಮುಸ್ಲಿಂ ಬಾಂಧವರು ಆ ಭಾಗದಲ್ಲಿ ಸೌಹಾರ್ದಯುತವಾಗಿ ಅಣ್ಣ-ತಮ್ಮಂದಿರಂತೆ ಬದುಕುತ್ತಿರುವುದನ್ನು ನಾವು ಕಂಡಿದ್ದೇವೆ. ಆದರೆ, ಈ ಸಂದರ್ಭದಲ್ಲಿ ಏಕಾಯಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ನಾವೆಲ್ಲರೂ ಒಂದೇ ನಾಡಿನ ಮಕ್ಕಳು. ನಮ್ಮ ಧರ್ಮಗಳು ಬೇರೆಯಾದರೂ ಮನುಷ್ಯತ್ವ ಒಂದೇ ಆಗಿರುವುದರಿಂದ ಸಹಬಾಳ್ವೆಯಿಂದ ಬದುಕೋಣ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

Latest Indian news

Popular Stories