ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಆರ್. ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (BJP MLA Munirathna) ಅವರನ್ನು ನ್ಯಾಯಾಧೀಶರು ಎರಡು ದಿನ ಪೊಲೀಸ್ ಕಸ್ಟಡಿಗೆ (Police custody) ನೀಡಿದ್ದಾರೆ.
ಶನಿವಾರ ಪೊಲೀಸರು ಮುನಿರತ್ನ ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಬಳಿ ಬಂಧಿಸಿ ಕರೆತಂದರು. ರಾತ್ರಿ ಆರೋಗ್ಯ ತಪಾಸಣೆ ನಡೆಸಿ, ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು.
ಪೊಲೀಸರು ಒಂದು ವಾರ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿಗೆ ಮನವಿ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.
ಮಧ್ಯರಾತ್ರಿ ಒಂದುವರೆ ಗಂಟೆ ವಿಚಾರಣೆ
ಬಂಧನ ಬಳಿಕ ಬಿಜೆಪಿ ಶಾಸಕ ಮುನಿರತ್ನ ಮಂಕಾಗಿದ್ದರು. ಶನಿವಾರ ಸಂಜೆ ಏನೂ ಮಾತನಾಡದೆ ಮೌನಕ್ಕೆ ಜಾರಿದ್ದರು. ಪೊಲೀಸರು ಶಾಸಕ ಮುನಿರತ್ನ ಅವರನ್ನು ಅಶೋಕ್ನಗರ ಠಾಣೆಗೆ ಕರೆತಂದರು. ಮಧ್ಯರಾತ್ರಿ 12 ರಿಂದ 1.30ರವರೆಗೆ ಸತತ ಒಂದುವರೆ ಗಂಟೆಗಳ ಕಾಲ ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ವಿಚಾರಣೆ ನಡೆಸಿದರು.
ತನಿಖಾಧಿಕಾರಿಗಳ ಪ್ರಶ್ನೆಗೆ ಶಾಸಕ ಮುನಿರತ್ನ ನಾನೇನು ಮಾಡಿಲ್ಲ, ಷಡ್ಯಂತ್ರ ಅಂತ ಉತ್ತರ ನೀಡಿದ್ದಾರೆ. ನ್ಯಾಯಾದೀಶರ ಮುಂದೆಯೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಅಂತ ಮುನಿರತ್ನ ಹೇಳಿದ್ದಾರೆ ಎಂದು ಮಾಹಿತಿ ದೊರೆತಿದೆ.