ಉಡುಪಿ: ಈ ಬಾರಿ ಕರಾವಳಿಯ ಉಭಯ ಜಿಲ್ಲೆಗಳಾದ ಉಡುಪಿ-ದ.ಕ ದಲ್ಲಿ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸರಿದಿದ್ದು ಕುಡಿಯುವ ನೀರಿನ ಸಮಸ್ಯೆಗೆ ಬ್ರೇಕ್ ಕೊಟ್ಟಿತು. ಇದೀಗ ಕರಾವಳಿ ಕರ್ನಾಟಕಕ್ಕೆ ಕೆಲವು ಗಂಟೆಗಳಲ್ಲಿ ಮುಂಗಾರು ಆಗಮನವಾಗಲಿದ್ದು ಈತನ್ಮಧ್ಯೆ ಕರಾವಳಿಯಲ್ಲಿ ವಿಪರೀತ ಸೆಕೆಯ ಅನುಭವವಾಗುತ್ತಿದೆ.
ಮೋಡ ಕವಿದ ವಾತಾವರಣವಿದ್ದು ಎರಡು-ಮೂರು ದಿನಗಳಿಂದ ಸೂಕ್ತ ಮಳೆ ಬಾರದ ಕಾರಣ ವಾತಾವರಣದ ತಾಪಮಾನ ಹೆಚ್ಚಾಗಿದೆ. ಇದರಿಂದ ಜನ ಮತ್ತೆ ಸೆಕೆ-ಬೆವರು ಎನ್ನುವಂತಾಗಿದೆ.
ಹವಾಮಾನ ಇಲಾಖೆಯ ವರದಿಯ ಪ್ರಕಾರ ನೈಋತ್ಯ ಮುಂಗಾರು ಅವಧಿಯಲ್ಲಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕ ಮಳೆಯಾಗುವ ನಿರೀಕ್ಷೆ ಇದೆ. ಕಳೆದ ವರ್ಷ ಕರಾವಳಿಯಲ್ಲಿ ಮೂರು ವರ್ಷಗಳಿಂದ ವಾಡಿಕೆಗಿಂತ ಅಧಿಕ ಮುಂಗಾರು ಮಳೆ ಸುರಿದಿಲ್ಲ. 2021ರಲ್ಲಿ ಶೇ. 13, ಮತ್ತು ಕಳೆದ ವರ್ಷ ಶೇ. 14ರಷ್ಟು ಮಳೆ ಕೊರತೆ ಉಂಟಾಗಿತ್ತು. 2022ರಲ್ಲಿ ಮಳೆ ಕೊರತೆ ಆಗಿರಲಿಲ್ಲ.
ಈಗಾಗಲೇ ಮುಂಗಾರು ಮಾರುತಗಳು ಕೇರಳ ಪ್ರವೇಶಿಸಿದ್ದು ಕೆಲವು ದಿನದಲ್ಲಿ ಕರ್ನಾಟಕ ಕರಾವಳಿ ಪ್ರದೇಶ ತಲುಪಲಿದ್ದು ಭಾರೀ ಮಳೆ ನಿರೀಕ್ಷಿಸಲಾಗಿದೆ.