ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ವಿರುದ್ಧ ಜಾತಿ ನಿಂದನೆ, ಕಿರುಕುಳ, ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿರುವ ಆರೋಪ ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಾಜಿ ಸಚಿವ, ರಾಜರಾಜೇಶ್ವರಿನಗರ ಬಿಜೆಪಿ ಶಾಸಕ ಮುನಿರತ್ನ ಅವರು ಹೇಳಿದ್ದಾರೆ.
ಕಸ ವಿಲೇವಾರಿ ಗುತ್ತಿಗೆದಾರ ಚಲುವರಾಜು ಎಂಬುವರಿಗೆ ಶಾಸಕ ಮುನಿರತ್ನ ಅವಾಚ್ಯವಾಗಿ ನಿಂದಿಸಿರುವ ಆಡಿಯೋ ಬಯಲಾದ ಬೆನ್ನಲ್ಲೇ, ಮುನಿರತ್ನ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದವು.
ಆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮುನಿರತ್ನ ಅವರು, ಆಡಿಯೋ ತೆಗೆದುಕೊಂಡು ಈಗಲೇ ಸ್ಪೀಕರ್ ಕಚೇರಿಗೆ ಚಲುವರಾಜು ಬರಲಿ. ಎರಡು ಸಮುದಾಯ ಸೇರಿ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಇದೇ ಚಲುವರಾಜು ನನ್ನನ್ನು ಶ್ಲಾಘಿಸಿದ್ದರು. 7-8 ವರ್ಷಗಳಿಂದ ನನ್ನ ಜೊತೆಯಲ್ಲಿದ್ದರು, ಈಗ ನಾನು ಹಣ ಕೇಳ್ತೀನಾ? ರಾಜಕೀಯ ಪಿತೂರಿಯಿಂದ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ತಿಂಗಳ ಹಿಂದೆ ನನ್ನ ಬಳಿ ಬಂದು ಯಾರೋ ಹಲ್ಲೆ ಮಾಡಿದ್ದರು ಅಂದಿದ್ದರು. ನಾನು ಎಲ್ಲೂ ನಾಪತ್ತೆಯಾಗಿಲ್ಲ. ನನ್ನ ಸ್ನೇಹಿತರ ಮೂಲಕ ಭೇಟಿ ಮಾಡಲು ಚಲುವರಾಜು ಯತ್ನಿಸಿದ್ದರು ಎಂದು ಹೇಳಿದರು.
ನಾನು ಕಾನೂನಿನ ಮೊರೆ ಹೋಗುತ್ತೇನೆ. ನಾನು ಯಾವುದೇ ರೀತಿ ಭ್ರಷ್ಟಾಚಾರ ನಡೆಸಿಲ್ಲ. ಕಾಂಗ್ರೆಸ್ ನಲ್ಲಿದ್ದಾಗ ಅವರಿಗೆ ನಾನು ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದೆ. ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟಿದ್ದಕ್ಕೆ ಈಗ ನಾನು ಕೆಟ್ಟವನಾಗಿಬಿಟ್ಟಿದ್ದೇನೆಂದು ಕಿಡಿಕಾರಿದರು.
ಇದೇ ವೇಳೆ ತಮ್ಮ ವಿರುದ್ಧದ ಪಿತೂರಿಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಡಾ.ಮಂಜುನಾಥ್ ವಿರುದ್ಧ ಪರಾಭವಗೊಂಡಿದ್ದ ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾಂಗ್ರೆಸ್‌ನ ಕೆಲ ಅಭ್ಯರ್ಥಿಗಳ ಕೈವಾಡವಿದೆ ಎಂದೂ ಆರೋಪಿಸಿದರು,
ಈ ನಡುವೆ ಪ್ರಕರಣ ಸಂಬಂಧ ಗುತ್ತಿಗಾರನ ವಿರುದ್ಧ ಪ್ರತಿ ದೂರು ದಾಖಲಿಸುವುದಾಗಿ ಮುನಿರತ್ನ ಪರ ವಕೀಸಲು ತಿಳಿಸಿದ್ದಾರೆ. ಅಲ್ಲದೆ, ಆರೋಪ ಸಂಬಂಧ ಶಾಸಕರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಶೀಘ್ರ ಬಿಡುಗಡೆಯಾಗಲಿದ್ದಾರೆಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ