ನೇಜಾರು ಕೊಲೆ ಪ್ರಕರಣ | ಶೀಪ್ರ ಗತಿಯಲ್ಲಿ ವಿಚಾರಣೆ ನಡೆಸಿ ಪ್ರಕರಣ ಭೇದಿಸಿದ ಎಸ್ಪಿ ಅರುಣ್.ಕೆ ನೇತೃತ್ವದ ಉಡುಪಿ ಪೊಲೀಸರು!

ನೇಜಾರು ಕೊಲೆ ಪ್ರಕರಣದಲ್ಲಿ ಉಡುಪಿ ಪೊಲೀಸರ ಕಾರ್ಯ ಶ್ಲಾಘನೀಯ. ಅತ್ಯಂತ ಜಟಿಲ ಪ್ರಕರಣ ಆರೋಪಿಯನ್ನು ಬೆನ್ನಟ್ಟಿ ಬೆಳಗಾವಿಯ ಕುಡಚಿಯಲ್ಲಿ ಬಂಧಿಸಿದ್ದ ಪೊಲೀಸರು ನ. 15ರಂದು ಆರೋಪಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹದಿನಾಲ್ಕು ದಿನ ಪೊಲೀಸ್ ಕಸ್ಟಡಿಗೆ ಕೋರಿದ್ದರು.

ಅದರಂತೆ 14 ದಿನ ಅಂದರೆ ನ. 28ರ ವರೆಗೆ ಪೊಲೀಸ್‌ ಕಸ್ಟಡಿಗೆ ನ್ಯಾಯಾಧೀಶರು ಆದೇಶ ಮಾಡಿದ್ದರು. ಮಹಜರು ಪ್ರಕ್ರಿಯೆ ಸಹಿತ ಆರೋಪಿ ಕೊಲೆಗೆ ಬಳಸಿದ್ದ ಬಹುತೇಕ ಎಲ್ಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಾಗಿದೆ. ತನಿಖೆಯನ್ನೂ ಪೊಲೀಸರು ತ್ವರಿತಗತಿಯಲ್ಲಿ ಮಾಡುತ್ತಲೇ ಇದ್ದಾರೆ. ತನಿಖಾ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಬಲವಾದ ಚಾರ್ಜ್‌ಶೀಟ್‌ ಸಲ್ಲಿಕೆಯಾಗುವಂತೆ ಕ್ಷಿಪ್ರಗತಿಯ ವಿಚಾರಣೆ, ತನಿಖೆಯಾಗಿದೆ.

ಕೊಲೆ ನಡೆದ ದಿನದಿಂದ ಆರೋಪಿಯ ಮಹಜರಿನವೆಗೆ ಅತ್ಯಂತ ವೃತ್ತಿಪರತೆಯಿಂದ ಕಾರ್ಯ ನಿರ್ವಹಿಸಿರುವ ಎಸ್ಪಿ ಅರುಣ್ ಕೆ ನೇತೃತ್ವದ ಪೊಲೀಸ್ ತಂಡ, ತನಿಖೆ ಪೂರ್ಣಗೊಳ್ಳದೆ ಅಪೂರ್ಣ ಮಾಹಿತಿಯನ್ನು ಅಧಿಕೃತವಾಗಿ ಎಲ್ಲಿಯೂ ಮಾಧ್ಯಮದೊಂದಿಗೆ ಹಂಚಿಕೊಂಡಿಲ್ಲ ಎಂಬುವುದು ವಿಶೇಷ. ಬಹುತೇಕ ವಿಚಾರಣೆಯ ಅಂಶವನ್ನು ಗೌಪ್ಯವಾಗಿಟ್ಟುಕೊಂಡು ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ಪ್ರಬಲ ಸಾಕ್ಷ್ಯಾಧಾರ ಹಾಜರು ಪಡಿಸಲು ಸಿದ್ಧತೆ ಮಾಡಿಕೊಂಡಿರುವ ಸಾಧ್ಯತೆ ಇದೆ.

ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಕಾರ್ಯವನ್ನು ಸ್ವತಃ ಸಂತ್ರಸ್ಥ ಕುಟುಂಬದವರು ಶ್ಲಾಘಿಸಿ ಶನಿವಾರ ಎಸ್ಪಿಯವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದರು.

ದೀಪಾವಳಿಯ ದಿನವೇ ಈ ಹತ್ಯಾಕಾಂಡ ನಡೆದಿದ್ದರೂ ಕುಟುಂಬದೊಂದಿಗೆ ಹಬ್ಬವನ್ನು ಆಚರಿಸದೆ ಪೊಲೀಸ್ ಇಲಾಖೆಯ ಹಲವು ಸಿಬ್ಬಂದಿಗಳು ತನಿಖಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಈ ಪ್ರಕರಣ ಬೇಧಿಸಲು ಹಗಲಿರುಳು ದುಡಿದಿದ್ದರು. ಇದೊಂದು ಅತ್ಯಂತ ಪ್ರೊಫೆಷನಲ್ ಹತ್ಯಾಕಾಂಡದ ತರ ಕಂಡು ಬಂದರೂ ಸಿಸಿಟಿವಿಯ ಜಾಡು ಹಿಡಿದು, ಮಾನವ ಮತ್ತು ತಾಂತ್ರಿಕ ಬುದ್ಧಿಮತ್ತೆಯ ಮೂಲಕ ಆರೋಪಿಯ ಹೆಡೆಮುರಿ ಕಟ್ಟಿ ಕಂಬಿಯ ಹಿಂದೆ ತಳ್ಳಿರುವ ಕಥೆಯೇ ರೋಚಕ!

ಎಲ್ಲ ಒತ್ತಡವನ್ನು ಮೆಟ್ಟಿ ನಿಂತು ಯಶಸ್ವಿ ವಿಚಾರಣೆ:

ಈ ಪ್ರಕರಣದ ನಡೆದ ಕೂಡಲೇ ಪೊಲೀಸ್ ಇಲಾಖೆ ಕೊಲೆಗಾರನನ್ನು ಶೀಘ್ರ ಬಂಧಿಸುವ ಒತ್ತಡಕೊಳಗಾಗಿತ್ತು. ಸಾರ್ವಜನಿಕರು, ಸಂಘಟನೆಗಳು, ರಾಜಕಾರಣಿಗಳು ಕೂಡಲೇ ಆರೋಪಿಯನ್ನು ಬಂಧಿಸಿ ಕಾನೂನಾತ್ಮಕವಾದ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದರು. ಈ ಎಲ್ಲ ಒತ್ತಡಗಳ ನಡುವೆ ಅತ್ಯಂತ ವೃತ್ತಿಪರರಾಗಿ ಕರ್ತವ್ಯ ನಿರ್ವಹಿಸಿರುವ ಪೊಲೀಸರು ಆರೋಪಿಯನ್ನು 72 ಗಂಟೆಯಲ್ಲಿ ಸೆರೆ ಹಿಡಿದು ಜನರ ನಡುವಿನ ಆತಂಕ‌ ದೂರೀಕರಿಸಿದ್ದರು.

ಎಸ್ಪಿ ಅರುಣ್. ಕೆ ಕೊಲೆ ಪ್ರಕರಣವನ್ನು ನಿಭಾಯಿಸಿದ ರೀತಿಯಂತೂ ಅದ್ಬುತವಾಗಿತ್ತು. ಮಾಧ್ಯಮದವರಿಗೂ ಯಾವುದೇ ಕಾರಣಕ್ಕೂ ತನಿಖೆ ಪೂರ್ಣವಾಗದೆ ಕಾರಣ ತಿಳಿಸಿರಲಿಲ್ಲ.ವಿಚಾರಣೆಯಲ್ಲಿ ಕಾರಣ ಧೃಡವಾದ ನಂತರ ಈ ಕೊಲೆಗೆ ಅಸೂಯೆ ಮತ್ತು ದ್ವೇಷ ಕಾರಣ ಎಂದು ಮಾಧ್ಯಮದವರಿಗೆ ತಿಳಿಸಿದ್ದರು. ಅಲ್ಲಿಯವರೆಗೆ ಮಾಧ್ಯಮಗಳು ಕೂಡ ಊಹಾಪೋಹಾಗಳನ್ನೇ ನಂಬಿದ್ದವು.

ನ್ಯೂನತೆ ರಹಿತ ಚಾರ್ಜ್’ಶೀಟ್ ಅಗತ್ಯ:

ಇನ್ನು ಆರೋಪಿಯು ಈ ಪ್ರಕರಣದಲ್ಲಿ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾಗುವುದು ಕೂಡ ಅತೀ ಅಗತ್ಯ. ಆ ಹಿನ್ನೆಲೆಯಲ್ಲಿ ಪೊಲೀಸರು ತಾವು ಸಂಗ್ರಹಿಸಿದ ಸಾಕ್ಷ್ಯಾಧಾರದ ಬುನಾದಿಯಲ್ಲಿ ನ್ಯೂನತೆ ರಹಿತವಾದ ಆರೋಪ ಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸುವುದು ಕೂಡ ಅತೀ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾದರೆ ಆರೋಪಿ ಚೌಗಲೆ ಅತ್ಯಂತ ಹೀನಾಯ ಕೃತ್ಯಕ್ಕೆ ಕಾನೂನಿನಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆ ನಿರೀಕ್ಷಿಸಬಹುದಾಗಿದೆ.

Latest Indian news

Popular Stories