ಉಡುಪಿ, ಸೆ.14; ರೈಲಿನಲ್ಲಿ ಪ್ರಯಾಣಚೀಟಿ ಇಲ್ಲದೆ, ದಿವ್ಯಾಂಗರಿಗೆ ಮಿಸಲಿಟ್ಟಿದ್ದ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಪ್ರಾಯದ ಬಾಲಕ ಬಾಲಕಿಯನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಯಾಣಚೀಟಿ ತಪಸಾಣಾಧಿಕಾರಿ ಕೆ. ವಾಸುದೇವ್ ಪೈ ವಶಕ್ಕೆ ಪಡೆದುಕೊಂಡಿರುವ ಘಟನೆಯು ಶುಕ್ರವಾರ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಡೆದಿದೆ.
ಪ್ರಯಾಣ ಚೀಟಿ ತಪಸಾಣಾಧಿಕಾರಿಯವರು, ಅಪ್ರಾಪ್ತ ಮಕ್ಕಳನ್ನು ಕಾನೂನು ಪ್ರಕ್ರಿಯೆ ನಡೆಸಲು ರೈಲ್ವೆ ಆರ್.ಪಿ.ಎಫ್ ಸುಧೀರ್ ಶೆಟ್ಟಿಯವರ ಸಮ್ಮುಖ ಹಾಜರುಪಡಿಸಿದರು. ಇರ್ವರು ಸಹೋದರ ಸಹೋದರಿಯರಾಗಿದ್ದು, ದರ್ಶನ್ (15ವ) ಧನಲಕ್ಷ್ಮೀ (12ವ) ತಂದೆ ಮಂಜುನಾಥ ಆರ್, ಬೆಂಗಳೂರು ಬ್ಯಾಟರಾಯನಪುರದ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರದ ನಿವಾಸಿಗಳೆಂದು, ಹೆತ್ತವರಿಗೆ ತಿಳಿಸದೆ ಮನೆಬಿಟ್ಟು ಬಂದವರೆಂದು, ಮಕ್ಕಳ ಬ್ಯಾಗುಗಳಲ್ಲಿ ಸ್ಪಾನರುಗಳು ಇದ್ದವೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ವಿಚಾರಣೆ ಪ್ರಕ್ರಿಯೆಗಳು ಮುಗಿದ ಬಳಿಕ ರೈಲ್ವೇ ಪೋಲಿಸರು ಹೆತ್ತವರಿಗೆ ವಿಷಯ ಮುಟ್ಟಿಸಿದ್ದು, ಮಕ್ಕಳನ್ನು ನಿಟ್ಟೂರಿನಲ್ಲಿರುವ ಮಕ್ಕಳ ಕಲ್ಯಾಣಸಮಿತಿಗೆ ಮಕ್ಕಳ ರಕ್ಷಣಾ ಘಟಕದ ಕೇಸ್ ವರ್ಕರ್ ಪ್ರಕಾಶ್, ಅಂಬಿಕಾ ಎಸ್ ಅವರು ಸಮಿತಿಗೆ ಒಪ್ಪಿಸಿದ್ದಾರೆ. ಕಾರ್ಯಚರಣೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಾಗಿದ್ದಾರೆ. ಕಾನೂನು ಪ್ರಕ್ರಿಯೆ ಸಂದರ್ಭ ತನಿಖಾಧಿಕಾರಿ ಜಿನಾ ಪಿಂಟೋ ಇದ್ದರು.