ಉಡುಪಿ: ಕರ್ತವ್ಯಲೋಪ: 80 ಪೊಲೀಸ್‌ ಸಿಬಂದಿ ಅಮಾನತು; ಎಸ್‌ಪಿ ಕಟ್ಟುನಿಟ್ಟಿನ ಕ್ರಮ

ಉಡುಪಿ: ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರದ ವಿರುದ್ಧ ಜಿಲ್ಲಾ ಪೊಲೀಸ್‌ ಇಲಾಖೆ ಕಠಿನ ಕ್ರಮಕ್ಕೆ ಮುಂದಾಗಿದೆ. ಕರ್ತವ್ಯ ಲೋಪ ಆರೋಪದಲ್ಲಿ ಒಂದು ವರ್ಷದಲ್ಲಿ 4 ಮಂದಿ ಎಸ್‌ಐಗಳು ಸಹಿತ 80ಕ್ಕೂ ಅಧಿಕ ಸಿಬಂದಿ ಅಮಾನತುಗೊಂಡಿದ್ದಾರೆ. ಜಿಲ್ಲೆಯಲ್ಲಿ ಇಷ್ಟೊಂದು ಪೊಲೀಸರು ಅಮಾನತುಗೊಳ್ಳುತ್ತಿರುವುದು ಇದೇ ಮೊದಲು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಾಗಿ ಅಧಿಕಾರ ವಹಿಸಿ 1 ವರ್ಷ ಪೂರೈಸಿರುವ ಡಾ| ಅರುಣ್‌ ಕೆ. ಅವರು ಪೊಲೀಸರ ಕರ್ತವ್ಯದ ಬಗ್ಗೆ ಗಮನಹರಿಸುತ್ತಿದ್ದು, ಒಂದು ವರ್ಷದಿಂದಲೂ ವಿವಿಧ ಕಾರಣಗಳಿಂದ ಕರ್ತವ್ಯಲೋಪ ಮಾಡಿದವರಿಗೆ ಅಮಾ ನತು, ವರ್ಗಾವಣೆ ಶಿಕ್ಷೆ ನೀಡಲಾಗಿದೆ.

ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಎಸ್‌ಐಗಳ ಪೈಕಿ ಕೆಲವರ ಅಮಾನತು ಆದೇಶ ಮುಗಿದಿದ್ದು, ಹಿಂದೆ ಸೇವೆ ಸಲ್ಲಿಸುತ್ತಿದ್ದ ಠಾಣೆ ಬಿಟ್ಟು ಬೇರೆ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅಕ್ರಮ ಮರಳು ಸಾಗಾಟಗಾರರೊಂದಿಗೆ ಶಾಮೀಲಾಗಿರುವುದು, ಲಂಚ ಪಡೆದಿ ರುವುದು, ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಹೋಗಿ ಕಾನೂನು ಸುಳಿಯಲ್ಲಿ ಸಿಲುಕಿರುವುದು ಮುಂತಾದವು ಎಸ್‌ಐಗಳ ಅಮಾನತಿಗೆ ಕಾರಣಗಳು.

ಪೊಲೀಸರ ವಿರುದ್ಧ ಭ್ರಷ್ಟಾಚಾರ ಸಹಿತ ವಿವಿಧ ಆರೋಪಗಳು ಬಂದಾಗ ಸಾರ್ವಜನಿಕರು ಎಸ್‌ಪಿ ಅವರ ಗಮನಕ್ಕೆ ತರಬಹುದು. ಎಸ್‌ಐಗಳ ಮೇಲೆ ಆರೋಪ ಬಂದಾಗ ಅವರು ಸರ್ಕಲ್‌ ಇನ್‌ಸ್ಪೆಕ್ಟರ್‌ಗೆ ಮಾಹಿತಿ ನೀಡಿ ವರದಿ ನೀಡುವಂತೆ ಸೂಚಿಸುತ್ತಿದ್ದು, ಆಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾನ್‌ಸ್ಟೆಬಲ್‌ಗ‌ಳ ವಿರುದ್ಧ ಆರೋಪ ಬಂದಾಗ ಎಸ್‌ಐಗಳು ಹಾಗೂ ಇನ್‌ಸ್ಪೆಕ್ಟರ್‌ಗಳ ವಿರುದ್ಧ ಆರೋಪ ಬಂದಲ್ಲಿ ಡಿವೈಎಸ್‌ಪಿ ವರದಿ ನೀಡಬೇಕು.

ಅಮಾನತು ಆದೇಶ ಕನಿಷ್ಠ 1 ತಿಂಗಳಿನಿಂದ ಗರಿಷ್ಠ ಎಷ್ಟು ಸಮಯದ ವರೆಗೂ ನೀಡ ಬಹುದು. ಅಮಾನತು ಗೊಂಡವರು ಅರ್ಧದಷ್ಟು ವೇತನ ಪಡೆಯುತ್ತಾರೆ.
ಈ ನಡುವೆ ತಮ್ಮ ಮೇಲಿನ ಆರೋಪ ಸುಳ್ಳು ಎಂಬ ಬಗ್ಗೆ ದಾಖಲೆಗಳಿದ್ದರೆ ಐಜಿಗೆ ಮಾಹಿತಿ ನೀಡುವ ಅವಕಾಶವೂ ಇದೆ.

Latest Indian news

Popular Stories