ಉಡುಪಿ, ಸೆ.14: ತೀವ್ರತರಹದ ಹಲ್ಲೆಯಿಂದ ಮೂರೂವರೆ ವರ್ಷ ಪ್ರಾಯದ ಮಗು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹೆಬ್ರಿ ತಾಲೂಕಿನ ಚಕ್ಕರಮಕ್ಕಿ ಶೇಡಿಮನೆ ಎಂಬಲ್ಲಿ ನಡೆದಿದೆ.
ಉಡುಪಿ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ದಾಖಲಾಗಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನೀಡಿರುವ ದೂರಿನಂತೆ ಅಮಾವಾಸ್ಯೆಬೈಲು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗುವಿಗೆ ಆರೋಗ್ಯ ಸರಿ ಇಲ್ಲ ಎಂದು ಹೇಳಿ ಆಸ್ಪತ್ರೆಗೆ ಪೋಷಕರು ಕರೆದು ಕೊಂಡು ಬಂದಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಮಗುವಿನ ಮೈಮೇಲೆ ತೀವ್ರ ತರಹದ ಗಾಯಗಳು ಕಂಡುಬಂದಿವೆ. ಮಗುವಿನ ಮೇಲಾದ ಗಾಯದ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ