ಉಡುಪಿ: ರಾಷ್ಟ್ರೀಯ ಹೆದ್ದಾರಿ ಕಲ್ಸಂಕ ಸರ್ಕಲಿನಿಂದ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆಯು ಇಂದ್ರಾಣಿ ನದಿಯ ದಂಡೆಯ ಮೇಲೆ ಹಾದು ಹೋಗುತ್ತದೆ. ರಸ್ತೆಯ ಎಡ ಹಾಗೂ ಬಲ ಪಾರ್ಶ್ವದಲ್ಲಿ ನದಿ ಹರಿಯುತ್ತಿದೆ.
ರಸ್ತೆಯ ಪರಿಧಿಗೆ ಯಾವುದೇ ತಡೆಬೇಲಿ ಇಲ್ಲದಿರುವುದರಿಂದ ದುರ್ಘಟನೆಗಳು ನಡೆಯುತ್ತಿದ್ದು. ಅಪಾಯಗಳಿಗೆ ಆಹ್ವಾನ ನೀಡುವ ಸ್ಥಳವಾಗಿ ಮಾರ್ಪಟ್ಟಿದೆ. ಈ ಸ್ಥಳದಲ್ಲಿ ಯಾತ್ರಿಕರನ್ನು ಸಾಗಿಸುವ ಆಟೋ ನದಿಗೆ ಉರುಳಿ ಬಿದ್ದ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಹಾಗೆಯೇ ಕಳೆದ ವರ್ಷ ಸಹ ಆಟೋ ಮತ್ತು ಕಾರು ನಿಯಂತ್ರಣ ತಪ್ಪಿ ನದಿಗೆ ಬಿದ್ದು ಯಾತ್ರಿಕರು ಮತ್ತು ವಾಹನ ಚಾಲಕರು ಸಣ್ಣ ಪುಟ್ಟ ಗಾಯಾಳುಗಳಾಗಿ ಪ್ರಾಣಾಪಾಯದಿಂದ ಪಾರದ ಘಟನೆಯು ಸಂಭವಿಸಿತ್ತು.
ಈಗಾಗಲೇ ಪಾದಚಾರಿಗಳು ನಡೆದು ಸಾಗುತ್ತಿದ್ದಾಗ ಆಯಾತಪ್ಪಿ ಬಿದ್ದ ಘಟನೆಗಳು ಬಹಳವಾಗಿ ನಡೆದಿದೆ. ಎರಡು ವರ್ಷದ ಹಿಂದೆ ಮಳೆಗಾಲದ ಸಮಯದಲ್ಲಿ ಪಾದಚಾರಿಯೊಬ್ಬ ಆಯಾತಪ್ಪಿ ನದಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿತ್ತು, ಮೃತನ ಶವವು ನಿಟ್ಟೂರಿನಲ್ಲಿ ಗಾಳಗಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಗಾಳಕ್ಕೆ ಸಿಲುಕಿಕೊಂಡು ಪತ್ತೆಯಾಗಿತ್ತು. ಈ ರಸ್ತೆ ಯಾವಾಗಲೂ ವಾಹನ ದಟ್ಟಣೆಯಿಂದಿರುತ್ತದೆ. ಶ್ರೀಕೃಷ್ಣ ಮಠಕ್ಕೆ ಬರುವ ಹೊರ ಜಿಲ್ಲೆಯ, ಹಾಗೂ ಹೊರ ರಾಜ್ಯದ ಯಾತ್ರಿಕರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತದೆ. ಈ ಹಿಂದೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಕಲ್ಸಂಕ ಇಂದ್ರಾಳಿ ನದಿ ದಂಡೆಗೆ ತಡೆಬೇಲಿ ನಿರ್ಮಿಸಲು ಸಂಬಂಧಪಟ್ಟವರಲ್ಲಿ ಆಗ್ರಹಪಡಿಸಿದ್ದರು. ಆದರೆ ಯಾರೂ ಸಮಸ್ಯೆಗೆ ಸ್ಪಂದಿಸಿರಲಿಲ್ಲ.
ಈಗಲಾದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ, ನಗರಾಡಳಿತ ಸಮಸ್ಯೆಯನ್ನು ಪರಿಶೀಲಿಸಿ ಅಪಾಯಕಾರಿ ಸ್ಥಳದಲ್ಲಿ ತಡೆಬೇಲಿ ನಿರ್ಮಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.