ಉಡುಪಿ: ಅಕ್ರಮ ಬಾಂಗ್ಲಾ ವಲಸಿಗರಿಗೆ ನ್ಯಾಯಾಂಗ ಬಂಧನ

ಉಡುಪಿ: ಮಲ್ಪೆ ಸಹಿತ ವಿವಿಧ ಕಡೆಗಳಲ್ಲಿ ಬಂಧಿತರಾಗಿ ಪೊಲೀಸ್‌ ಕಸ್ಟಡಿಯಲ್ಲಿದ್ದವರು ಸಹಿತ ಒಟ್ಟು ಎಂಟು ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು  ಪೊಲೀಸರು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅ.12ರಂದು ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಕೀಂ ಅಲಿ, ಸುಜೋನ್‌ ಎಸ್‌.ಕೆ. ಫಾರೂಕ್‌, ಇಸ್ಮಾಯಿಲ್‌ ಎಸ್‌.ಕೆ., ಕರೀಂ ಎಸ್‌.ಕೆ., ಸಲಾಂ ಎಸ್‌.ಕೆ., ರಾಜಿಕುಲ್‌ ಎಸ್‌.ಕೆ. ಅವರನ್ನು ಪೊಲೀಸರು ಬಂಧಿಸಿದ್ದರು.

ಇವರನ್ನು ಅ.14ರಂದು ಪೊಲೀಸರು ಐದು ದಿನಗಳ ಕಾಲ  ಕಸ್ಟಡಿಗೆ ಪಡೆದು ವಿಚಾರಣೆ ಮಾಡಿದ್ದರು. ಇವರು ನೀಡಿದ ಮಾಹಿತಿ ನೆಲೆಯಲ್ಲಿ  ಕಾರ್ಕಳದಲ್ಲಿ ಅ.17ರಂದು ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಕಾರ್ಕಳದಲ್ಲಿ ಮುಹಮ್ಮದ್‌ ಇಮಾಂ ಶೇಖ್‌ ಹಾಗೂ ಮುಹಮ್ಮದ್‌ ರಿಮುಲ್‌ ಇಸ್ಲಾಮ್‌ ಅವರನ್ನು ಹಾಗೂ  ಅ.18ರಂದು ಸಂತೆಕಟ್ಟೆಯಲ್ಲಿ  ಮುಹಮ್ಮದ್‌ ಜಹಾಂಗೀರ್‌ ಆಲಂ ಎಂಬಾತನನ್ನು ಬಂಧಿಸಲಾಗಿತ್ತು.ಏಳು ಮಂದಿಯ ಐದು ದಿನಗಳ ಪೊಲೀಸ್‌ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಹಾಗೂ ಶುಕ್ರವಾರ ಬಂಧಿತನಾಗಿದ್ದ ಜಹಾಂಗೀರ್‌ನನ್ನು ಪೊಲೀಸರು ಉಡುಪಿಯ ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶ ಮನು ಪಾಟೇಲ್‌ ಅವರು ಎಂಟು ಮಂದಿ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.

ಬಂಧಿತ 10 ಮಂದಿ ಆರೋಪಿಗಳಿಗೆ ಜಾಮೀನು ನೀಡುವಂತೆ ಕೋರಿ ನ್ಯಾಯವಾದಿ ಅಸಾದುಲ್ಲ ಕಟಪಾಡಿ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದರು. ನ್ಯಾಯಾಲಯವು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವ ಬಗ್ಗೆ ಮುಂದಿನ ವಿಚಾರಣೆಯನ್ನು ಅ.21ಕ್ಕೆ ಮುಂದೂಡಿ ಆದೇಶ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Latest Indian news

Popular Stories