ಸುಳ್ಯ| ಅವಹೇಳನಕಾರಿ ಹೇಳಿಕೆ ಆರೋಪ: ಅರಣ್ಯಾಧಿಕಾರಿ‌ ಬಂಧನ, ಜಾಮೀನು

ಸುಳ್ಯ: ಮುಸ್ಲಿಮರ ಬಗ್ಗೆ ಪ್ರಶಂಸಿಸಿ ಫೇಸ್‌ಬುಕ್‌ ಪೋಸ್ಟ್ ಹಾಕಿದ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಬಳಿ ಸ್ಪಷ್ಟೀಕರಣ ಕೆಳುವ ಸಲುವಾಗಿ ಯುವಕನೊಬ್ಬ ಕರೆ ಮಾಡಿದ್ದು, ಈ ವೇಳೆ ಅರಣ್ಯಾಧಿಕಾರಿ ಸಂಘಪರಿವಾರದಿಂದಾಗಿ ಒಂದು ಸಮಾಜದ 1ಲಕ್ಷ ಹೆಣ್ಣು ಮಕ್ಕಳು ವೇಶ್ಯೆಯರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಈ ಆಡಿಯೋವನ್ನು ವೈರಲ್ ಮಾಡಲಾಗಿದ್ದು, ಇದೀಗ ಸಂಘಪರಿವಾರದ ತೀವ್ರ ವಿರೋಧದ ಬಳಿಕ ಪೊಲೀಸರು ಸಂಜೀವ ಪೂಜಾರಿಯನ್ನು ಬಂಧಿಸಿದ್ದು, ನ್ಯಾಯಾಲಯ ಜಾಮೀನು ನೀಡಿದೆ.

ಸಂಜೀವ ಪೂಜಾರಿಯವರ ಬಂಧನಕ್ಕೆ ಪುತ್ತೂರಿನಲ್ಲಿ ಹಿಂದೂಪರ ಸಂಘಟನೆಗಳು ಶುಕ್ರವಾರ ಬೆಳಗ್ಗೆ ಪ್ರತಿಭಟನೆ ನಡೆಸಿತ್ತು. ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ಹಿಂದೂಪರ ಕಾರ್ಯಕರ್ತರು ಸಂಜೀವ ಪೂಜಾರಿಯವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದರು. ಪ್ರತಿಭಟನೆ ಬೆನ್ನಲ್ಲೇ ಸಂಜೀವ ಪೂಜಾರಿಯವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ: ಮೂರು ದಿನಗಳ ಹಿಂದೆ ಸಂಜೀವ ಪೂಜಾರಿ ಕಾಣಿಯೂರು ತಮ್ಮ ಎಫ್‌ಬಿಯಲ್ಲಿ‌ “ನಾನು ಕಂಡಂತೆ ತಕ್ಷಣಕ್ಕೆ ಸಹಾಯ ಮಾಡುವುದರಲ್ಲಿ ಮುಸಲ್ಮಾನರದ್ದು ಎತ್ತಿದ ಕೈ” ಪೋಸ್ಟ್ ಹಾಕಿದ್ದರು. ಸುರೇಶ್ ಕಾಸರಗೋಡು ಎಂಬ ಹಿಂದೂ ಕಾರ್ಯಕರ್ತ ಸಂಜೀವ ಪೂಜಾರಿಯರಿಗೆ ದೂರವಾಣಿ ಕರೆ ಮಾಡಿ ಈ ಪೋಸ್ಟ್ ಬಗ್ಗೆ ಆಕ್ಷೇಪ ಎತ್ತಿದ್ದರು. ಈ ಸಂಭಾಷಣೆ ವೇಳೆ ಸಂಜೀವ ಪೂಜಾರಿಯವರು ಒಂದು ಸಮಾಜದ ಹೆಣ್ಮಕ್ಕಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ತುಳುವಿನಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು.

Latest Indian news

Popular Stories