ಉಡುಪಿ | ಹೊಸ ಶಿಕ್ಷಣ ನೀತಿಯಿಂದ ಸಾಮಾಜಿಕ ಶೈಕ್ಷಣಿಕ ಅನಾನುಕೂಲಗಳು ಹೆಚ್ಚಾಗಿವೆ – ಡಾ.ಅನಿತಾ ರಾಂಪಾಲ್

ಉಡುಪಿ: ‘ಸರಕಾರವನ್ನು ಕೆಲಸ ಕೊಡಲು ಕೇಳಬೇಕಾಗಿಲ್ಲ. ನೀವೇ ಕೆಲಸ ಸೃಷ್ಟಿ ಮಾಡಿ ಕೊಳ್ಳಿ ಎನ್ನಲಾಗುತ್ತಿದೆ. ಶಿಕ್ಷಣದೊಂದಿಗೆ ಯಾವುದೂ ಸಂಬಂಧಿಸಿದಂತೆ ಕಾಣುವುದಿಲ್ಲ. ಶಿಕ್ಷಣಕ್ಕೂ ಉದ್ಯೋಗಕ್ಕೂ ಸಂಬಂಧವೇ ಇಲ್ಲವಾಗುತ್ತಿದೆ. ಸಕಾರಾತ್ಮಕವಾಗಿ ಯೋಚಿಸಿ ಎಂದು ಹೇಳಲಾಗುತ್ತಿದೆ. ಆದರೆ ವ್ಯವಸ್ಥೆ ಮಾತ್ರ ತನ್ನ ನಕಾರಾತ್ಮಕ ಕೆಲಸಗಳನ್ನು ಮಾಡುತ್ತಿದೆ. ಸಸ್ಯಾಹಾರ – ಮಾಂಸಾಹಾರಗಳ ನಡುವೆ ತಿಕ್ಕಾಟಗಳಾಗುತ್ತಿವೆ. ಸರಕಾರ ಇಂತಹ ವಿಷಯಗಳ ಬಗ್ಗೆ ಸ್ಪಷ್ಟ ನಿಲುವು ಹೊಂದುವುದು ಅಗತ್ಯವಾಗಿದೆ ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ವಿಭಾಗದ ಮಾಜಿ ಮುಖ್ಯಸ್ಥೆ ಡಾ.ಅನಿತಾ ರಾಂಪಾಲ್ ಹೇಳಿದ್ದಾರೆ.

ಕರ್ನಾಟಕ ಭಾರತ ಜ್ಞಾನ ವಿಜ್ಞಾನ ಸಮಿತಿಯ(ಬಿಜಿವಿಎಸ್) ಉಡುಪಿ ಜಿಲ್ಲಾ ಘಟಕ, ಸಮಿತಿಯ ಟೀಚನ್ ಮಾಸ ಪತ್ರಿಕೆಯ ವತಿಯಿಂದ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾದ ಟೀಚರ್ ಶೈಕ್ಷಣಿಕ ಹಬ್ಬದ ಎರಡನೇ ದಿನವಾದ ಇಂದು ಅವರು ಶಿಕ್ಷಣದ ಸಮಕಾಲೀನ ಸವಾಲುಗಳು ಎಂಬ ವಿಷಯದ ಕುರಿತು ಮಾತನಾಡುತಿದ್ದರು.

ಶಿಕ್ಷಣ ಕ್ಷೇತ್ರದಲ್ಲಿನ ಸಾಲುಗಳನ್ನು ಎತ್ತ ಬಲ್ಲ ಸಾಮರ್ಥ್ಯ ಇರುವುದು ಶಿಕ್ಷಕರಿಗೆ ಮಾತ್ರ. ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ದಿನವೂ ಓದಿಸುವಂತಹ ಸ್ಥಿತಿ ಒದಗಿ ಬಂದಿದೆ. ಮಹಿಳೆಯರಿಗೆ ಮತದಾನದ ಹಕ್ಕು ನಮಗೆ ಸ್ವಾತಂತ್ರ್ಯ ಸಿಕ್ಕಾಗಲೇ ದೊರಕಿದೆ. ನಮ್ಮ ದೇಶ ಕ್ರಾಂತಿಕಾರಕ ಸಂವಿಧಾನ ವನ್ನು ಹೊಂದಿದೆ. ಆಹಾರ ವೈವಿಧ್ಯಮಯ ಪರಂಪರೆಯನ್ನು ಹೊಂದಿದೆ. ಶಿಕ್ಷಣದಿಂದ ಕಲಿಯಲಾರದ್ದೇ ಅಧಿಕವಾಗಿದೆ ಎಂದರು.

ಹೊಸ ಶಿಕ್ಷಣ ನೀತಿಯಿಂದ ಸಾಮಾಜಿಕ ಶೈಕ್ಷಣಿಕ ಅನಾನುಕೂಲಗಳು ಹೆಚ್ಚಾಗಿವೆ. ಇವುಗಳನ್ನು ಅಗೋಚರಗೊಳಿಸುವ ಪ್ರಯತ್ನ ನಡೆದಿವೆ. ಶಾಲೆಗಳನ್ನು ಮುಚ್ಚಲಾಗುತ್ತಿದೆ ಮತ್ತು ವಿಲೀನ ಮಾಡಲಾಗುತ್ತಿದೆ. ಸರಕಾರದ ಲೆಕ್ಕಾಚಾರದಲ್ಲಿ ಶಾಲೆಗಳೇ ನಿರುಪಯುಕ್ತವಾಗಿವೆ. ತಮಿಳುನಾಡು ಹೊಸ ಶಿಕ್ಷಣ ನೀತಿಯನ್ನು ವಿರೋಧಿಸಿದೆ ಎಂದು ಅವರು ತಿಳಿಸಿದರು.

ಈ ಸಂಬಂಧ ರಾಜ್ಯಗಳು ಒಪ್ಪಂದಕ್ಕೆ ಸಹಿ ಮಾಡದೆ ಹೋದರೆ ಕೇಂದ್ರ ಆ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಎಷ್ಟೋ ರಾಜ್ಯಗಳ ಎಸ್‌ಎಸ್‌ಎ ಶಿಕ್ಷಕರಿಗೆ ಕಳೆದ ಮೂರುನಾಲ್ಕು ತಿಂಗಳುಗಳಿಂದ ಸಂಬಳವೇ ಆಗಿಲ್ಲ. ಶಿಕ್ಷಣದ ಹಕ್ಕು ಜಾರಿಯಾಗುತ್ತಿಲ್ಲ ಎಂದ ಅವರು, ಶೇ.10ರಷ್ಟು ಮಕ್ಕಳು ಮಾತ್ರ ಉನ್ನತ ಶಿಕ್ಷಣಕ್ಕೆ ಹೋಗುತ್ತಿದ್ದಾರೆ. ಉಳಿದವರ ಗತಿ ಏನು? ಎಂದು ಪ್ರಶ್ನಿಸಿದರು.

ಮಿದುಳು ಮತ್ತು ಕೈಗಳ ನಡುವಿನ ಸಂಬಂಧವನ್ನು ಕಡಿತ ಮಾಡಲಾಗುತ್ತಿದೆ. ಪ್ರಾಯೋಗಿಕ ಅಂಶಗಳೇ ಇಲ್ಲವಾಗುತ್ತಿದೆ. ನಾಯಕತ್ವದ ಲಕ್ಷಣಗಳು ಕುಸಿತವಾಗಿದೆ. ವ್ಯವಸ್ಥೆಯ ದೋಷಗಳನ್ನು ಮರೆಮಾಚುವ ಪ್ರಯತ್ನಗಳು ಪ್ರಜ್ಞಾ ಪೂರ್ವಕವಾಗಿ ಮಾಡಲಾಗುತ್ತಿದೆ. ಖಾಸಗಿ ಶಿಕ್ಷಣ ವ್ಯವಸ್ಥೆ ತಮಗೆ ಬೇಕಾಗಿರುವುದನ್ನು ಮಾಡುತ್ತಿವೆ. ಅವನ್ನು ಸರಕಾರಿ ವ್ಯವಸ್ಥೆ ಅನುಸರಿಸುತ್ತಿದೆ. ಶಿಕ್ಷಣದ ಮೂಲಕ ಎಲ್ಲವನ್ನು ವಿಮರ್ಶಾತ್ಮಕವಾಗಿ ನೋಡಬೇಕಾಗಿದೆ ಎಂದು ಅವರು ಹೇಳಿದರು.

ಸಮಾರೋಪ ಸಮಾರಂಭ: ಟೀಚರ್ ಶೈಕ್ಷಣಿಕ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪ್ರೊ.ರಾಮಾನುಜಮ್ ‘ಜನ ವಿಜ್ಞಾನ ಚಳುವಳಿಯ ಮುಂದಿನ ಹಾದಿ’ ವಿಷಯದ ಕುರಿತು ಮಾತನಾಡಿದರು.

IMG 20241019 WA0161 Education, Udupi

ಅಧ್ಯಕ್ಷತೆಯನ್ನು ವಿಮರ್ಶಕ, ಸಾಹಿತಿ ಪ್ರೊ.ಮುರಳೀಧರ್ ಉಪಾಧ್ಯ ವಹಿಸಿದ್ದರು. ಶೈಕ್ಷಣಿಕ ಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಉಪಸ್ಥಿತರಿದ್ದರು. ಉಪನ್ಯಾಸಕ ಅನಂತರಾಮ ನಾಯಕ್ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು. ಬಿಜಿವಿಎಸ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ ಪಟ್ಲ ಕಾರ್ಯಕ್ರಮ ನಿರೂಪಿಸಿದರು

Latest Indian news

Popular Stories