ಮೇಕೆದಾಟು ಯೋಜನೆ ವಿಳಂಬ ಆಗಿರುವುದು ಬಿಜೆಪಿ ಸರ್ಕಾರದಲ್ಲಿ, ಬಿಜೆಪಿಯಿಂದ ವಿಳಂಬ ದ್ರೋಹ ಆಗಿರುವುದು: ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಇಂದು ಶನಿವಾರ ಮತ್ತು ನಾಳೆ ಭಾನುವಾರ ಕೊರೋನಾ ವಾರಾಂತ್ಯ ಕರ್ಫ್ಯೂ ಇದ್ದರೂ ಮೇಕೆದಾಟು ಯೋಜನೆ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ನೀರಿಗಾಗಿ ನಡಿಗೆ ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಹಠಕ್ಕೆ ಬಿದ್ದಿದ್ದಾರೆ.

ನಾಳೆಯಿಂದ (ಜ.9)10 ದಿನಗಳ ಕಾಲ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕೆಂಡಮಂಡಲರಾಗಿದ್ದಾರೆ. ನಾವು ಪಾದಯಾತ್ರೆ ಮಾಡಲು ಮೊದಲೇ ನಿರ್ಧರಿಸಿದ್ದೆವು. ನಾವು ನಿರ್ಧಾರ ಮಾಡಿದ ಬಳಿಕ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದಾರೆ. ಇದರ ಹಿಂದಿನ ಉದ್ದೇಶವೇನು ಎಂದು ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿದ್ದಾರೆ.

ಪಾದಯಾತ್ರೆ ಸಂದರ್ಭದಲ್ಲಿ ಕೊರೋನಾ ನಿಯಮ ಪಾಲಿಸುತ್ತೇವೆ. ಸರ್ಕಾರ ಏನು ತೀರ್ಮಾನ ತೆಗೆದುಕೊಂಡರೂ, ಕ್ರಮ ತೆಗೆದುಕೊಂಡರೂ ನಾವು ಎದುರಿಸಲು ಸಿದ್ಧವಾಗಿದ್ದೇವೆ. ನಾವು ಕಾನೂನಿಗೆ ಗೌರವ ಕೊಡುತ್ತೇವೆ. ಕಾನೂನು ಉಲ್ಲಂಘಿಸಲ್ಲ, ನಮ್ಮನ್ನು ಬಂಧಿಸಿದರೆ ಬಂಧಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ರಾಮನಗರ ಜಿಲ್ಲೆಗೆ ಮಾತ್ರ ಏಕೆ ಕೆಲ ನಿಯಮ ಜಾರಿ ಇದೆ. ರಾಜ್ಯಾದ್ಯಂತ ಇಲ್ಲದ ನಿಯಮ ರಾಮನಗರ ಜಿಲ್ಲೆಗೆ ಏಕೆ? ಹಾಗಾದರೆ ಸರ್ಕಾರದ ಉದ್ದೇಶವೇನು, ನಮ್ಮ ಪಾದಯಾತ್ರೆಗೆ ಅಡ್ಡಿಪಡಿಸುವುದೇ, ಬೇಕಂತಲೇ 144 ಹಾಕಿದ್ದಾರೆ. ಸರ್ಕಾರ ನಮ್ಮ ಪಾದಯಾತ್ರೆ ನಿಲ್ಲಿಸಲು ಪ್ಲಾನ್ ಮಾಡಿದೆ. ಇಂದು ಸರ್ಕಾರ ಸುಳ್ಳು ಜಾಹೀರಾತು ನೀಡಿದೆ. ಅನಗತ್ಯ ಗೊಂದಲ ಮಾಡುವ ಉದ್ದೇಶದಿಂದ ಸರ್ಕಾರ 144 ಹಾಕಿದೆ. ನಾವು 15 ಜನ ಪಾದಯಾತ್ರೆ ಮಾಡಿದರೆ ಬಿಡುತ್ತೇವೆ ಅಂತ ಕಾರಜೋಳ ಹೇಳುತ್ತಾರೆ. 15 ಜನ ನಡೆದರೆ ಅದು 144 ಕಲಂ ಉಲ್ಲಂಘನೆ ಅಲ್ವಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಾವು ಒಂದೂವರೆ ತಿಂಗಳು ಪಾದಯಾತ್ರೆ ಮಾಡಲು ತೀರ್ಮಾನ ಮಾಡಿದ್ದೆವು. ಸರ್ಕಾರ ನಂತರ ಕರ್ಫ್ಯೂ ಹೇರಿಕೆ ಮಾಡಿದ್ದು. ಸಿಎಂ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದರು. ಅವರು ಏನು ಮಾಡಿದ್ರು? ನಾವು ನಿಯಮದ ಪ್ರಕಾರ ಪಾದಯಾತ್ರೆ ಮಾಡುತ್ತೇವೆ. ಮಾತೆತ್ತಿದರೆ ಕಾಂಗ್ರೆಸ್ ಸರ್ಕಾರವಿದ್ದಾಗ ಮೇಕೆದಾಟು ಕೆಲಸ ಏಕೆ ಮಾಡಿರಲಿಲ್ಲ ಎಂದು ಕೇಳುತ್ತಾರೆ.ಬಿಜೆಪಿ ಎರಡೂವರೆ ವರ್ಷದಿಂದ ಏನು ಮಾಡಿದೆ ಅಂತ ಲೆಕ್ಕ ಕೊಡಲಿ ಎಂದು ಕೇಳಿದರು.

ಫೆಬ್ರವರಿ 2018 ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ನೀರು ಹಂಚಿಕೆ ವ್ಯಾಜ್ಯ ಅಂತಿಮವಾಗಿದ್ದು, ಅಲ್ಲಿಯವರೆಗೂ ಕಾವೇರಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಅದಾದ ಮೇಲೆ 177.75 ಟಿಎಂಸಿ ನೀರನ್ನು ಸಾಮಾನ್ಯ ವರ್ಷದಲ್ಲಿ ಮಳೆ ಬಂದಾಗ ತಮಿಳು ನಾಡಿಗೆ ಕೊಡಬೇಕು ಎಂದು ಆದೇಶ ನೀಡಿದೆ. ಈಗ ಹೆಚ್ಚು ನೀರು ಸಮುದ್ರಕ್ಕೆ ಹರಿದುಹೋಗುತ್ತಿದೆ. ಆ ನೀರನ್ನು ನಮ್ಮಲ್ಲಿ ಜಲಾಶಯ ಮಾಡಿ ಶೇಖರಣೆ ಮಾಡಿ ಜನರಿಗೆ ಕುಡಿಯುವುದಕ್ಕೆ ಹಂಚಿಕೆ ಮಾಡಬಹುದಲ್ಲವೇ ಎಂದು ಕೇಳಿದ್ದಾರೆ.

ಗೋವಿಂದ ಕಾರಜೋಳ ಅವರು ಹಿಂದೆ 2008ರಿಂದ 2013ರವರೆಗೆ ಜಲ ಸಂಪನ್ಮೂಲ ಸಚಿವರಾಗಿದ್ದರು. ಆಗ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಏಕೆ ಮಾಡಲಿಲ್ಲ. ವಿಳಂಬ ದ್ರೋಹ ಆಗಿರುವುದು ಬಿಜೆಪಿ ಸರ್ಕಾರದಲ್ಲಿ,ಈಗ ಮತ್ತೆ ಇವರ ಸರ್ಕಾರವಿದೆ. ಪರಿಸರ ಇಲಾಖೆಯಿಂದ ಅನುಮೋದನೆ ಪಡೆಯಲಿಲ್ಲ ಏಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Latest Indian news

Popular Stories