ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಸರ್ಕಾರಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಸರಿಸುಮಾರು ಒಂದೂವರೆ ವರ್ಷದ ಗಂಡು ಮಗುವನ್ನು ಮಹಿಳೆಯೊಬ್ಬಳು ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಸ್ಪತ್ರೆಯೊಳಗೆ ಮಗುವಿನ ಸಮೇತ ಬಂದ ಮಹಿಳೆ, ಮಲಗಿದ್ದ ಮಗುವನ್ನ ಆಸ್ಪತ್ರೆಯಲ್ಲಿನ ದೇವರು ತೊಟ್ಟಿಲಲ್ಲಿ ಇಟ್ಟು ಪರಾರಿಯಾಗಿದ್ದಾಳೆ. ಈ ದೃಶ್ಯ ಆಸ್ಪತ್ರೆಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ವಲ್ಪ ಸಮಯದ ನಂತರ ಮಗು ನಿದ್ದೆಯಿಂದ ಎದ್ದು ಆಳುತ್ತಿರುವುದನ್ನ ಗಮನಿಸಿದ ಆಸ್ಪತ್ರೆಯ ದಾದಿಯರು ಮಗುವನ್ನ ಎತ್ತಿಕೊಂಡು ಸಮಾಧಾನ ಮಾಡಿ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಮಗುವಿನ ಪೋಷಕರು ಪತ್ತೆಯಾಗದಿದ್ದಾಗ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಮಹಿಳೆ ಮಗು ಇಟ್ಟು ಆತುರಾತುರವಾಗಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಸದ್ಯ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವ ಮಗು ತಂದೆ-ತಾಯಿ ಯಾರಿರಬಹುದು ಪತ್ತೆ ಹಚ್ಚಲು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಸಂತೋಷ್ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದುವರೆಗೂ ಮಗುವಿನ ಪೋಷಕರು ಪತ್ತೆಯಾಗಿಲ್ಲ ಅಂತ ತಿಳಿದುಬಂದಿದೆ.