ಏಷಿಯಾ ಕಪ್ 2024: ಭಾರತಕ್ಕೆ ಸುಲಭ ತುತ್ತಾದ ಪಾಕಿಸ್ತಾನ; ಹರ್ಮನ್ ಪಡೆಗೆ ಗೆಲುವಿನ ಶುಭಾರಂಭ

ಶ್ರೀಲಂಕಾದ ದಂಬುಲಾದ ರಂಗಿರಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಏಷ್ಯಾಕಪ್ ಪಂದ್ಯದಲ್ಲಿ ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ, ಪಾಕಿಸ್ತಾನವನ್ನು 7 ವಿಕೆಟ್​ಗಳಿಂದ ಏಕಪಕ್ಷೀಯವಾಗಿ ಮಣಿಸಿದೆ.

ಇದರೊಂದಿಗೆ ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡ ಪರಿಣಾಮ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ 19.2 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 108 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭಿಕರಿಬ್ಬರ ಸಿಡಿಲಬ್ಬರದ ಬ್ಯಾಟಿಂಗ್​ನಿಂದಾಗಿ 14.1 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 19.2 ಓವರ್‌ಗಳಲ್ಲಿ 10 ವಿಕೆಟ್‌ಗೆ 108 ರನ್ ಗಳಿಸಿತು. ಈ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಕ್ರಮಾಂಕ ಸಂಪೂರ್ಣ ವಿಫಲವಾಯಿತು. ಕೇವಲ ಐದು ರನ್ ಗಳಿಸಿದ ಗುಲ್ ಫಿರೋಜಾ ಅವರ ರೂಪದಲ್ಲಿ ತಂಡಕ್ಕೆ ಮೊದಲ ಹೊಡೆತ ಬಿದ್ದಿತು. ಇದಾದ ಬಳಿಕ ಮುನಿಬಾ ಅಲಿ ಕೂಡ 11 ರನ್ ಗಳಿಸಿ ಔಟಾದರು. ಸಿದ್ರಾ ಅಮೀನ್ ಪಾಕಿಸ್ತಾನದ ಪರ ಗರಿಷ್ಠ 25 ರನ್ ಬಾರಿಸಿದರು. ಅವರ ಇನ್ನಿಂಗ್ಸ್​ನಲ್ಲಿ ಮೂರು ಬೌಂಡರಿಗಳು ಸೇರಿದ್ದವು. ಉಳಿದಂತೆ ಅಲಿಯಾ ರಿಯಾಜ್ ಆರು ರನ್, ನಿದಾ ದಾರ್ ಎಂಟು ರನ್, ಇರಾಮ್ ಜಾವೇದ್ ಶೂನ್ಯ, ತುಬಾ ಹಸನ್ 22 ರನ್, ಸೈದಾ ಅರುಬ್ ಶಾ 2 ರನ್, ನಶ್ರಾ ಸಂಧು ಶೂನ್ಯ, ಸಾದಿಯಾ ಇಕ್ಬಾಲ್ ಶೂನ್ಯ ಮತ್ತು ಫಾತಿಮಾ ಸನಾ ( ನಾಟೌಟ್) 22 ರನ್ ಬಾರಿಸಿದರು. ಭಾರತದ ಪರ ದೀಪ್ತಿ ಶರ್ಮಾ ಮೂರು ವಿಕೆಟ್ ಪಡೆದರೆ, ರೇಣುಕಾ, ಪೂಜಾ ಮತ್ತು ಶ್ರೇಯಾಂಕಾ ತಲಾ ಎರಡು ವಿಕೆಟ್ ಪಡೆದರು.

Latest Indian news

Popular Stories